‘ಶುಕ್ರವಾರ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಪಡಿಸುವ ದಿನ’
ಉಡುಪಿ, ಆ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ನಗರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಉಡುಪಿ ಹಾಗೂ ರೋಟರಿ ಕ್ಲಬ್ ಕಲ್ಯಾಣಪುರ ಇವರ ಸಂಯುಕ್ತಾಶ್ರಯದಲ್ಲಿ ಕೆಳಾರ್ಕಳಬೆಟ್ಟು ಗೋಪಾಲಪುರ ಇಲ್ಲಿನ ರೈನಾ ಅಪಾರ್ಟ್‌ಮೆಂಟ್‌ನಲ್ಲಿ ವಾರದ ಒಂದು ದಿನ ಪ್ರತೀ ಶುಕ್ರವಾರ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶ ಮಾಡುವ ದಿನ ಒಣ ದಿನ (ಡೆಂಗಿ ಡೈ ಡೇ)ವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿ ಡಾ. ಸುರೇಶ್ ಶಾಸ್ತ್ರಿ ಮಾತನಾಡಿ, ಡೆಂಗಿ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದು ಹಗಲು ಹೊತ್ತು ಕಚ್ಚುವ ಈಡೀಸ್ ಸೊಳ್ಳೆ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ ಬಂದಲ್ಲಿ ಶೀಘ್ರ ಪತ್ತೆ ಮಾಡಿ ಸಂಪೂರ್ಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಆಶ್ವಿನ್‌ಕುಮಾರ್ ಮಾತನಾಡಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವು ದರೊಂದಿಗೆ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ನಿಯಂತ್ರಣ ಮಾಡಿದಲ್ಲಿ ಮಾತ್ರ ಡೆಂಗಿ ಜ್ವರದ ಹತೋಟಿ ಸುಲಭ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಪೌರಾಯುಕ್ತ ರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜಯ, ಕಲ್ಯಾಣಪುರದ ರೋಟರಿ ಕ್ಲಬ್ ಅಧ್ಯಕ್ಷ ಬ್ಯಾಪ್ಟಿಸ್ಟ್ ಡಯಾಸ್, ಉಡುಪಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾತ್ವಿಕ್, ರೈನಾ ಅಪಾರ್ಟ್‌ಮೆಂಟ್‌ನ ಮುಖ್ಯಸ್ಥರು, ವಿದ್ಯಾರತ್ನ ನಸಿರ್ಂಗ್ ಕಾಲೇಜು ಹಾಗೂ ನ್ಯೂಸಿಟಿ ನಸಿರ್ಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿನಯ ಕುಮಾರ್ ಕಬ್ಯಾಡಿ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ ಲಾರ್ವಾ ತಾಣಗಳ ಸಮೀಕ್ಷೆ ನಡೆಸಿ, ಲಾರ್ವಾ ತಾಣಗಳ ನಿರ್ಮೂಲನೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.