ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ
ಬೈಂದೂರು: ಇತ್ತೀಚಿಗೆ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ನಾರಾಯಣ ಮೊಗವೀರ ಕುಟುಂಬಕ್ಕೆ ಮೀನುಗಾರ ಸಂಕಷ್ಟ ಪರಿಹಾರ ನಿಧಿಯಡಿ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಉಡುಪಿ ಜಿಪಂನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಮೀನುಗಾರಿಕೆ ಯೋಜನೆಗಳು ಹಾಗೂ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಶಾಸಕರು, ಜ.2ರಂದು ಪರ್ಸಿನ್ ಬೋಟ್‌ನಲ್ಲಿ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆ ಆಗಿರುವ ಬಡ ಮೀನುಗಾರರಾದ ನಾರಾಯಣ ಮೊಗವೀರ ಅವರ ಸುಳಿವು ಸಿಗದೇ ಇರುವುದು ಅತ್ಯಂತ ದುಃಖದಾಯಕ ಸಂಗತಿಯಾಗಿದೆ ಎಂದರು.
ನಾಪತ್ತೆಯಾಗಿರುವವರನ್ನು ಹುಡುಕಲು ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ಈಗಾಗಲೇ ಮನವಿ ಮಾಡಲಾ ಗಿದೆ. ಆದರೆ ಬಡ ಮೀನುಗಾರರ ನೋವಿಗೆ ಸ್ಪಂದಿಸದ ಜಿಲ್ಲಾಡಳಿತ ಈ ಬಗ್ಗೆ ದಿವ್ಯ ನಿರ್ಲಕ್ಷ ತೋರಿದೆ. ಮೀನುಗಾರರ ಸಂಕಷ್ಟ ಸಮಯದಲ್ಲಿಯೇ ಬಳಕೆಯಾಗುವ ಸಂಕಷ್ಟ ಪರಿಹಾರ ನಿಧಿಯಡಿ 10 ಲಕ್ಷ ತುರ್ತು ಪರಿಹಾರ ನೀಡಲು ಜ.10ರಂದು ಆದೇಶ ಪತ್ರ ಆಗಿ 7 ದಿನ ಕಳೆಯುತ್ತಾ ಬಂದರೂ ಈವರೆಗೂ ವಿತರಿಸಿಲ್ಲ. ಹಾಗಾಗಿ ಇನ್ನೆರಡು ದಿನದಲ್ಲಿ ಪರಿಹಾರ ಮೊತ್ತದ ಚೆಕ್‌ನ್ನು ಮೀನುಗಾರರ ಕುಟುಂಬಕ್ಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.