ಕರ್ನಾಟಕ ಕ್ರೀಡಾಕೂಟದ ಮೊದಲ ಚಿನ್ನದ ಪದಕ ಗೆದ್ದ ಸಮರಾ ಚಾಕೋ
ಉಡುಪಿ-ಮಂಗಳೂರಿನಲ್ಲಿ ಒಂದು ವಾರ ಕಾಲ ನಡೆಯುವ ಮೂರನೇ ಕರ್ನಾಟಕ ಕ್ರೀಡಾಕೂಟದಲ್ಲಿ ಕ್ರೀಡಾಳುಗಳಿಗೆ ಗೆಲ್ಲಲು 631 ಚಿನ್ನದ ಪದಕ ಗಳಿದ್ದರೂ, ಮೊದಲ ಪದಕವನ್ನು ಗೆದ್ದು ಹೆಗ್ಗಳಿಕೆಯನ್ನು ಬೆಂಗಳೂರು ನಗರದ ಸಮರಾ ಚಾಕೋ ಪಡೆದರು.
ಕ್ರೀಡಾಕೂಟದಲ್ಲಿ ಫಲಿತಾಂಶ ದೊರಕಿದ ಮೊದಲ ಸ್ಪರ್ಧೆಯಾದ ಮಹಿಳೆಯರ 500ಮೀ. ಕಯಾಕಿಂಗ್ ಕೆ-1 ಸ್ಪರ್ಧೆಯಲ್ಲಿ ಅವರು ನಿರೀಕ್ಷೆಯಂತೆ ಮೊದಲಿಗರಾಗಿ ಗುರಿಮುಟ್ಟಿ ಕೂಟದ ಮೊಚ್ಚಮೊದಲ ಚಿನ್ನದ ಪದಕ ಗೆದ್ದುಕೊಂಡರು. ಕೆಲವೇ ಗಂಟೆಗಳ ಅಂತರದಲ್ಲಿ ಅವರು ಇನ್ನೂ ಮೂರು ಚಿನ್ನದ ಪದಕಗಳನ್ನು ಜಯಿಸಿ ಮೊದಲ ದಿನವೇ ನಾಲ್ಕು ಚಿನ್ನದ ಪದಕ ಗೆದ್ದ ವಿಶಿಷ್ಟ ಸಾಧನೆ ಮಾಡಿದರು.
ಬೆಂಗಳೂರಿನವರಾದ 19ವರ್ಷ ಪ್ರಾಯದ ಸಮರಾ ಎ.ಚಾಕೋ ಬಿಬಿಎಂ ವಿದ್ಯಾರ್ಥಿನಿಯಾಗಿದ್ದು ಇದೀಗ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಈವರೆಗೆ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ದೇಶವನ್ನೂ ಪ್ರತಿನಿಧಿಸಿದ್ದ ಇವರು ಹಲವಾರು ಪದಕಗಳನ್ನು ಗೆದ್ದು ಕೊಂಡಿದ್ದರು. ಇದೇ ತಿಂಗಳ 28ರಿಂದ ಉತ್ತರಖಂಡದಲ್ಲಿ ಪ್ರಾರಂಭ ಗೊಳ್ಳುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ಕಯಾಕಿಂಗ್ ಕೆ-1ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ಅಭ್ಯಾಸನಿರತರಾಗಿದ್ದಾರೆ.
ಎರಡು ವರ್ಷಗಳಿಂದ ವಾಟರ್‌ಸ್ಪೋರ್ಟ್ಸ್‌ನಲ್ಲಿ ಸಕ್ರಿಯರಾಗಿರುವ ಸಮರಾ ಏಷ್ಯನ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ದ್ದಾಗಿ ತಿಳಿಸಿದರು. ಕಯಾಕಿಂಗ್‌ನಲ್ಲಿ ದೇಶಕ್ಕೆ ಪದಕ ಗೆಲ್ಲುವ ಅತ್ಯುತ್ತಮ ಅವಕಾಶವಿರುವುದರಿಂದ ತಾನು ಈ ಕ್ರೀಡೆಯಲ್ಲಿ ಆಸಕ್ತಳಾಗಿರುವುದಾಗಿ ಸಮರಾ ತಿಳಿಸಿದರು. ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಲು ಅರ್ಹತೆ ಪಡೆಯುವ ಅವಕಾಶವಿರುವುದ ರಿಂದ ತಾನು ತುಂಬು ಆಸಕ್ತಿಯಿಂದ ಇದರಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.
ಕಯಾಕಿಂಗ್‌ನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು ಪ್ರಶ್ನಿಸಿದಾಗ, ಈ ಕ್ರೀಡೆಯಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶ ವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಲು ಅವಕಾಶವಿದೆ. ಅದಕ್ಕೆ ನಂಗೆ ಈ ಸ್ಪೋರ್ಟ್ಸ್ ತುಂಬಾ ಇಷ್ಟವಾಯಿತು ಎಂದರು.
‘ಎರಡು ವರ್ಷದಿಂದ ಕಯಾಕಿಂಗ್ ಅಭ್ಯಾಸ ನಡೆಸುತಿದ್ದೇನೆ. ಮೊದಲ ಒಂದು ವರ್ಷ ಬ್ಯಾಲೆನ್ಸಿಂಗ್ ಅಭ್ಯಾಸ ಮಾಡಿದೆ. ವೈಎಂಸಿ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದ್ದೇನೆ. ಕಳೆದೊಂದು ತಿಂಗಳಿನಿಂದ ಉಡುಪಿಯಲ್ಲಿ ಅಭ್ಯಾಸ ನಡೆಸಿದ್ದೇನೆ.’ ಎಂದು ಸಮರಾ ತಿಳಿಸಿದರು.