ಉಡುಪಿಯಲ್ಲಿ ವಾಟರ್‌ಸ್ಪೋರ್ಟ್ಸ್ ತರಬೇತಿ ಕೇಂದ್ರ, ಹಾಸ್ಟೆಲ್: ಕ್ಯಾ. ದಿಲೀಪ್ ಕುಮಾರ್
ದಿಲೀಪ್ ಕುಮಾರ್
ಉಡುಪಿ, ಜ.17: ಹೇರೂರು ಗ್ರಾಮದ ಮಡಿಸಾಲು ಹೊಳೆಯ ಈ ತಾಣವನ್ನು ಕೇಂದ್ರವಾಗಿರಿಸಿಕೊಂಡು ಉಡುಪಿಯಲ್ಲಿ ವಾಟರ್‌ಸ್ಪೋರ್ಟ್ಸ್‌ನ್ನು ಅಭಿವೃದ್ಧಿ ಪಡಿಸಲು ವಾಟರ್‌ಸ್ಪೋರ್ಟ್ಸ್‌ನ್ನು ಅಭಿವೃದ್ಧಿ ಪಡಿಸಲು ತರಬೇತಿ ಕೇಂದ್ರವೊಂದನ್ನು ಸ್ಥಾಪಿಸಲು ರಾಜ್ಯ ಕಯಾಕಿಂಗ್ ಆ್ಯಂಡ್ ಕನೋಯಿಂಗ್ ಅಸೋಸಿಯೇಷನ್ ಪ್ರಸ್ತಾಪವೊಂದನ್ನು ರಾಜ್ಯ ಸರಕಾರಕ್ಕೆ ನೀಡಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದಿಲೀಪ್‌ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೇರೂರು ಸೇತುವೆ ಸಮೀಪ ಮಡಿಸಾಲು ಹೊಳೆಯಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾ ಕೂಟ-2025ರ ಕಯಾಕಿಂಗ್ ಸ್ಪರ್ಧೆಯ ತಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ತರಬೇತಿ ಕೇಂದ್ರದೊಂದಿಗೆ ವಾಟರ್‌ಸ್ಪೋರ್ಟ್ಸ್ ಅಭ್ಯಾಸಿಗಳಿಗೆ ಹಾಸ್ಟೆಲ್ ಒಂದನ್ನು ಉಡುಪಿಯಲ್ಲಿ ತೆರೆಯಲು ಸಹ ಸಂಸ್ಥೆ ಮುಂದೆ ಬಂದಿದ್ದು, ಈ ಬಗ್ಗೆ ಪ್ರಯತ್ನಶೀಲವಾಗಿದೆ. ಸರಕಾರದ ಸಮ್ಮತಿ ದೊರೆತ ತಕ್ಷಣ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ಸದ್ಯ ಬೆಂಗಳೂರಿನಲ್ಲಿ ಮಾತ್ರ ಕಯಾಕಿಂಗ್, ಕನೋಯಿಂಗ್, ಡ್ರ್ಯಾಗನ್ ಬೋಟ್ ರೇಸ್ ಹಾಗೂ ಕೆನೋಯ್ ಸ್ವಲೋಮ್ ತರಬೇತಿಗೆ ಅವಕಾಶ ಗಳಿವೆ. ಉಡುಪಿಯಲ್ಲಿ ವಾಟರ್‌ಸ್ಪೋರ್ಟ್ಸ್ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಅಲ್ಲದೇ ಇವುಗಳು ಒಲಿಂಪಿಕ್‌ಗೂ ಸೇರ್ಪಡೆಗೊಂಡಿರುವು ದರಿಂದ ಹೆಚ್ಚು ಅವಕಾಶಗಳಿವೆ. ಭಾರತ ಪ್ರಯತ್ನಿಸಿದರೆ ಪದಕವನ್ನೂ ಗೆಲ್ಲುವ ಅವಕಾಶವೂ ಇದೆ ಎಂದರು.
ಹೀಗಾಗಿ ಉಡುಪಿಯನ್ನು ಕೇಂದ್ರೀಕರಿಸಿಕೊಂಡು ಸಂಸ್ಥೆ ರಾಜ್ಯದಲ್ಲಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದ ಅವರು ಸಮರಾ ಚಾಕೋ ಅಲ್ಲದೇ, ಧನಲಕ್ಷ್ಮೀ, ಐಶ್ವರ್ಯ, ದಾದಾಪೀರ್, ರೋಹನ್ ಆರ್., ತನ್ವಿ, ಆಕಾಶ್ ಶೆಟ್ಟಿ, ನಾಗೇಶ್ ನಾಯಕ್‌ರಂಥ ಪ್ರತಿಭಾನ್ವಿತ ಯುವ ಆಟಗಾರರು ಮುಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶವಾಗಲಿದೆ ಎಂದು ಕ್ಯಾ.ದಿಲೀಪ್ ಕುಮಾರ್ ಅಭಿಪ್ರಾಯ ಪಟ್ಟರು.