ಗುಂಪಿನಿಂದ ದಂಪತಿಗೆ ಹಲ್ಲೆ: ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಉಡುಪಿ, ಜ.17: ಗುಂಪೊಂದು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಲ್ಪೆ ಬೀಚ್ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದ ದಂಪತಿ ಶೇಖರ್ ತಿಂಗಳಾಯ ಮತ್ತು ಗೀತಾ ತಿಂಗಳಾಯ ಎಂಬವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೇಖರ್ ಅವರ ಪರಿಚಯಸ್ಥನಾದ ಸಾಗರ್ ಎಂಬಾತನು ಕರೆ ಮಾಡಿ ಮನೆಯಿಂದ ಹೊರಗೆ ಬರುವಂತೆ ತಿಳಿಸಿದ್ದು, ಮನೆಯಿಂದ ಹೊರ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಶೇಖರ್ ಅವರಿಗೆ ಆರೋಪಿಗಳಾದ ಸಾಗರ್, ಯಶವಂತ, ಚರಣ್, ಕಿಶೋರ್, ರಾಜ ಹಾಗೂ ಇತರ ಇಬ್ಬರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಶೇಖರ್ ಅಲ್ಲಿಂದ ಹೊರಡಲು ಪ್ರಯತ್ನಿಸಿದಾಗ, ಆರೋಪಿ ಸಾಗರ್ ಅವರನ್ನು ತಡೆದು, ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿಯೂ ಕೈಯಿಂದ ಹಲ್ಲೆ ಮಾಡಿದ್ದಾರೆ. ಗಲಾಟೆಯ ಶಬ್ದ ಕೇಳಿ ಮನೆಯಿಂದ ಹೊರ ಬಂದ ಶೇಖರ್ ಅವರ ಪತ್ನಿ ಗೀತಾರವರು ಬಿಡಿಸಲು ಬಂದಾಗ, ಆರೋಪಿಗಳಾದ ಸಾಗರ್ ಮತ್ತು ಯಶವಂತ್ ಗೀತಾರವರ ಮೈಗೆ ಕೈ ಹಾಕಿ, ಕುತ್ತಿಗೆ ಹಿಡಿದು ನೆಲಕ್ಕೆ ದೂಡಿ, ಇಬ್ಬರೂ ಸೇರಿ ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.