ಬೆಳ್ವೆ ಮದ್ರಸ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ
ಕುಂದಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯೊಂದಿಗೆ ಪ್ರೋತ್ಸಾಹ ನೀಡಿದಾಗ ಉತ್ತಮ ಜೀವನವನ್ನು ರೂಪಿಸಿ ಕೊಳ್ಳಲು ಸಾಧ್ಯವಿದೆ. ಸಮಾಜದ ಒಳಿತಿಗಾಗಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸುವುದು ಶ್ರೇಷ್ಠ ಕಾರ್ಯ ವಾಗಿದೆ ಎಂದು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ಹೇಳಿದ್ದಾರೆ.
ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮದ್ರಸ ಸದರ್ ಮುಅಲಿಮ್ ಮೌಲಾನ ಮುಹಮ್ಮದ್ ರಫೀಕ್, ಮೌಲಾನ ಆಸೀಫ್ ನದ್ವಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಬೆಳ್ವೆ ಮದ್ರಸ ಸ್ಥಾಪಕ ಕಾರ್ಯದರ್ಶಿ ಬಿ.ಕೆ.ಶಬ್ಬೀರ್ ಸಾಹೇಬ್, ಬೆಳ್ವೆ ಇಸ್ಲಾಮಿಕ್ ಯೂತ್ ಫೆಡರೇಶನ್ ಅಧ್ಯಕ್ಷ ಮುಹಮ್ಮದ್ ನಝೀರ್, ಮದ್ರಸ ಉಪಾಧ್ಯಕ್ಷ ಅಬ್ದುಲ್ ಸಾಹೇಬ್, ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ವೆ ಜುಮ್ಮಾ ಮಸೀದಿಗೆ ಭೂಮಿ ವಕ್ಫ್ ನೀಡಿದ ದಾನಿ ಗೌಸ್ ಸಾಹೇಬ್ ಬೆಳ್ವೆ, ಮದ್ರಸ ಅಭಿವೃದ್ದಿ ದಾನಿ ಅಯೂಬ್ ಬ್ಯಾರಿ ಬೆಳ್ವೆ ಅವರನ್ನು ಸನ್ಮಾನಿಸ ಲಾಯಿತು. ಇದೆ ಸಂದರ್ಭದಲ್ಲಿ ಮೌಲಾನ ಹಾಫೀಝ್ ಮುಹಮ್ಮದ್ ರಫೀಕ್ ಬೆಳ್ವೆ ಸಂಗ್ರಹಿಸಿ ರಚಿಸಿರುವ ಪುಸ್ತಕ ಫೀಕ್ ಸರಳ ಕನ್ನಡ ಅಧ್ಯಾಯ ಭಾಗ-೧ ಬಿಡುಗಡೆಗೊಳಿಸಲಾಯಿತು.
ಅಲ್ಬಾಡಿ ಶ್ರೀಲಕ್ಷ್ಮೀ ಶಾಮಿಯಾನ ಮತ್ತು ಲೈಟಿಂಗ್ಸ್ ಉದ್ಯಮಿ ದಿ. ಶಂಕರ ನಾಯ್ಕ ಸೇವೆಯ ಸ್ಮರಣಾರ್ಥ ಮರಣೋತ್ತರ ಗೌರವವನ್ನು ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ ಇವರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಮದ್ರಸ ಮಕ್ಕಳಿಂದ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಿತು.
ಅರ್ಫಾತ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಸೀಫ್ ಅಲ್ಬಾಡಿ ವರದಿ ವಾಚಿಸಿದರು. ರಝೀನ್ ಬೆಳ್ವೆ ಸನ್ಮಾನ ಪತ್ರ ವಾಚಿಸಿದರು. ಮುಹಮ್ಮದ್ ಜಾಸೀಮ್, ಮುಹಮ್ಮದ್ ರಬೀ, ಮುಹಮ್ಮದ್ ಫಾರೀಶ್ ಬಹುಮಾನ ಪಟ್ಟಿ ವಾಚಿಸಿದವರು. ಬೆಳ್ವೆ ಮದ್ರಸದ ಉಪಾಧ್ಯಕ್ಷ ಅಬ್ದುಲ್ಲಾ ಸಾಹೇಬ್, ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ, ರಿಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.