ಕರ್ನಾಟಕ ಕ್ರೀಡಾಕೂಟ| ಹಾಕಿ ಪಂದ್ಯಾಟ: ಬಳ್ಳಾರಿ, ಧಾರವಾಡ ತಂಡ ಫೈನಲಿಗೆ
ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟ-2025ರಲ್ಲಿ ಇಂದು ಮಣಿಪಾಲದ ಎಂಐಟಿ ಹಾಕಿ ಸ್ಟೇಡಿಯಂನಲ್ಲಿ ನಡೆದ ಪುರುಷರ ಹಾಕಿ ಪಂದ್ಯಾಟದಲ್ಲಿ ಬಳ್ಳಾರಿ ಹಾಗೂ ಧಾರವಾಡ ತಂಡಗಳು ಫೈನಲ್‌ನಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿವೆ.
ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಳ್ಳಾರಿ ತಂಡ, ಬಾಗಲಕೋಟೆ ತಂಡವನ್ನು 3-2ರ ಅಂತರದಿಂದ ಪರಾಭವಗೊಳಿಸಿತು. ವಿಜಯಿ ತಂಡದ ಪರವಾಗಿ ಯಲ್ಲಪ್ಪ, ಸಂದೀಪ್ ಹಾಗೂ ಪವನ್ ಗೋಲುಗಳನ್ನು ಗಳಿಸಿದರೆ, ಬಾಗಲಕೋಟೆ ಪರವಾಗಿ ಉಜ್ವಲ್ ಹಾಗೂ ಬಾಪುಲ್ ಅವರು ಗೋಲುಗಳನ್ನು ಗಳಿಸಿ ಅಂತರವನ್ನು ಕಡಿಮೆಗೊಳಿಸಿದರು.
ಎರಡನೇ ಪಂದ್ಯದಲ್ಲಿ ಧಾರವಾಡ ತಂಡ, ದಕ್ಷಿಣ ಕನ್ನಡ ತಂಡವನ್ನು 6-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್‌ಗೆ ತೇರ್ಗಡೆಗೊಂಡಿತು. ಧಾರವಾಡ ತಂಡದ ಪರವಾಗಿ ಪ್ರೇಮ್‌ಕುಮಾರ್, ಗಗನ್, ಪವನ್, ನಿಕಿತ್ ಗಾಗ್ಡೆ, ಕರಣ್ ಗಾಗ್ಡೆ ಹಾಗೂ ಅಖೀಲ್ ಅವರು ಗೋಲುಗಳನ್ನು ಹೊಡೆದರು.
ಮಹಿಳಾ ಟೇಬಲ್ ಟೆನಿಸ್: ಬೆಂಗಳೂರಿಗೆ ಚಿನ್ನ, ಧಾರವಾಡಕ್ಕೆ ಬೆಳ್ಳಿ
ಕರ್ನಾಟಕ ಕ್ರೀಡಾಕೂಟ-2025ರ ಅಂಗವಾಗಿ ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ಟೇಬಲ್ ಟೆನಿಸ್‌ನ ಮಹಿಳೆಯರ ತಂಡ ಸ್ಪರ್ಧೆಯಲ್ಲಿ ಬಬೆಂಗಳೂರಿನ ಮಹಿಳೆಯರು ಚಿನ್ನದ ಪದಕವನ್ನು ಗೆದ್ದುಕೊಂಡರು.
ಬೆಂಗಳೂರು ಮಹಿಳೆಯರು, ಫೈನಲ್‌ನಲ್ಲಿ ಧಾರವಾಡದ ಮಹಿಳಾ ತಂಡವನ್ನು 3-0 ಅಂತರದಿಂದ ಪರಾಭವಗೊಳಿಸಿ ದರು. ಬೆಂಗಳೂರು ತಂಡದ ನಿರುಪಮಾ ಪಿ., ಲಾವಣ್ಯ ಎಸ್.ರಾವ್, ದೃಷ್ಟಿ ಎಸ್.ಮೋರೆ ಹಾಗೂ ಅನನ್ಯಾ ಎಚ್.ಪಿ. ಅವರು ತಾವಾಡಿದ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳಲ್ಲಿ ಜಯ ಪಡೆದರು.
ಇದಕ್ಕೆ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಬೆಂಗಳೂರು ತಂಡ, ದಕ್ಷಿಣ ಕನ್ನಡ ಮಹಿಳಾ ತಂಡವನ್ನು 3-0 ಅಂತರದಿಂದ ಸೋಲಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ಧಾರವಾಡ ತಂಡ ಮೈಸೂರು ಮಹಿಳಾ ತಂಡವನ್ನು 3-0 ಅಂತರದಿಂದ ಹಿಮ್ಮೆಟ್ಟಿಸಿ ಫೈನಲ್ ಪ್ರವೇಶಿಸಿದ್ದರು.
ಸೆಮಿಫೈನಲ್‌ನಲ್ಲಿ ಸೋತ ದಕ್ಷಿಣ ಕನ್ನಡ ಹಾಗೂ ಮೈಸೂರು ತಂಡಗಳಿಗೆ ಕಂಚಿನ ಪದಕಗಳನ್ನು ನೀಡಲಾಗಿದೆ. ದಕ್ಷಿಣ ಕನ್ನಡ ತಂಡವನ್ನು ಅರಿಯಾ ಕ್ಲಾರಾ, ಆರಾನ್ನಾ ಸದೋತ್ರಾ, ತೆಹ್ರಾ ಎನ್. ಹಾಗೂ ಪ್ರಶಸ್ತಿ ಶೆಟ್ಟಿ ಪ್ರತಿನಿಧಿಸಿದ್ದರು.
ಅರ್ಚರಿ ಸ್ಪರ್ಧೆ: ಯಾದಗಿರಿ, ಬೆಂಗಳೂರು ನಗರಕ್ಕೆ ತಲಾ 2 ಚಿನ್ನ
ಮಣಿಪಾಲದ ಎಂಜೆಸಿ ಮೈದಾನದಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟದ ಅರ್ಚರಿ (ಬಿಲ್ಲುಗಾರಿಕೆ) ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಯಾದಗಿರಿಯ ರಘು ಅವರು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡರೆ ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರದ ಸ್ಪರ್ಧಿಗಳು ಚಿನ್ನದ ಪದಕಗಳನ್ನು ಕೊರಳಿಗೆ ಧರಿಸಿದರು.
ಪುರುಷರ 50ಮೀ. ಇಂಡಿಯನ್ ರೌಂಡ್‌ನಲ್ಲಿ ಯಾದಗಿರಿಯ ರಘು ಅವರು 290 ಅಂಕಗಳೊಂದಿಗೆ ಚಿನ್ನದ ಪದಕ ಪಡೆ ದರೆ, ಅದೇ ತಂಡದ ಮಲ್ಲಿಕಾರ್ಜುನ 288 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಹಾಗೂ ಬೆಂಗಳೂರಿನ ವಿಠಲ್ ಪರೀತ್ 270 ಅಂಕಗಳೊಂದಿಗೆ ಕಂಚಿನ ಪದಕ ಜಯಿಸಿದರು.
ಮಹಿಳೆಯರ 50ಮೀ. ಇಂಡಿಯನ್ ರೌಂಡ್‌ನಲ್ಲಿ ಚಿನ್ನದ ಪದಕ 265 ಅಂಕ ಸಂಪಾದಿಸಿದ ಬೆಂಗಳೂರು ನಗರದ ಶೋಭಾ ಎಲ್.ಡಿ. ಅವರ ಪಾಲಾಯಿತು.250 ಅಂಕ ಪಡೆದ ಬೆಂಗಳೂರು ನಗರದ ಪ್ರೇಮಾ ಯು. ಅವರು ಬೆಳ್ಳಿ ಪದಕ ಪಡೆದರೆ, 147 ಅಂಕಗಳೊಂದಿಗೆ ಯಾದಗಿರಿಯ ಭಾಗ್ಯಶ್ರೀ ಅವರು ಕಂಚಿನ ಪದಕ ಪಡೆದರು.
ಪುರುಷರ 30ಮೀ. ಇಂಡಿಯನ್ ರೌಂಡ್‌ನಲ್ಲಿ ಯಾದಗಿರಿಯ ರಘು 297 ಅಂಕಗಳಿಸಿ ಚಿನ್ನದ ಪದಕ ಗೆದ್ದರೆ, ರಾಯಚೂರಿನ ದೇವರಾಜ್ 290 ಅಂಕಗಳೊಂದಿಗೆ ಬೆಳ್ಳಿ ಪದಕ ಹಾಗೂ ಬೆಂಗಳೂರಿನ ವಿಜಯ ಪಿ.ಪಾಟೀಲ್ 277 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.
ಮಹಿಳೆಯರ 30ಮೀ. ಇಂಡಿಯನ್ ರೌಂಡ್‌ನಲ್ಲಿ ಬೆಂಗಳೂರು ನಗರದ ಪ್ರೇಮಾ ಯು. ಅವರು 273 ಅಂಕಗಳೊಂದಿಗೆ ಚಿನ್ನ, ಅದೇ ತಂಡ ಶೋಭಾ ಎಲ್.ಡಿ. 227 ಅಂಕಗಳೊಂದಿಗೆ ಬೆಳ್ಳಿ ಹಾಗೂ ಯಾದಗಿರಿಯ ಭಾಗ್ಯಶ್ರೀ 226 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.