ಸಾಧಕರ ಆದರ್ಶಗಳು ಎಲ್ಲರಿಗೂ ದಾರಿ ದೀಪವಾಗಲಿ: ತಲ್ಲೂರು ಶಿವರಾಮ ಶೆಟ್ಟಿ
ಬ್ರಹ್ಮಾವರ, ಜ.21: ಸಮಸ್ತರು ರಂಗ ಸಂಶೋಧನಾ ಕೇಂದ್ರ ಬೆಂಗಳೂರು ವತಿಯಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ಸಹಕಾರದಲ್ಲಿ ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ 2ನೇ ವರ್ಷದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರವಿವಾರ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಗೋಪಾಲಕೃಷ್ಣ ನಾಯರಿ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರದ ಹಂಗಿಲ್ಲದೆ ಕೇವಲ ರಂಗಭೂಮಿ, ನಾಟಕ ಬಗ್ಗೆ ಚಿಂತನೆ ನಡೆಸಿ ಕಾರ್ಯೋನ್ಮುಖರಾಗಿದ್ದ ಮಹಾನ್ ಸಾಧಕರಾಗಿದ್ದರು. ಸಾಧಕರಿಗೆ ಸಾವಿಲ್ಲ. ಅವರ ಆದರ್ಶಗಳು ನಮಗೆ ದಾರಿದೀಪ ವಾಗಬೇಕು. ಅವರು ಹಾಕಿ ಕೊಟ್ಟ ದಾರಿಯನ್ನು ನಾವು ಮರೆಯಬಾರದು. ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಗೋಪಾಲಕೃಷ್ಣ ದೇವರು ಭಟ್ಟ ಅವರಿಗೆ 2025ರ ‘ಶ್ರೀಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬ್ರಹ್ಮಾವರ ತಾಲೂಕು ಅಧ್ಯಕ್ಷ ವೈಕುಂಠ ಹೇರ್ಳೆ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಸಂತೋಷ್ ಯಾಜಿ ಮಣ್ಣಿಗೆ ಅಭಿನಂದನಾ ಮಾತನಾಡಿದರು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಬದರಿನಾಥ್ ಕೆ., ಗೋಪಾಲಕೃಷ್ಣ ನಾಯರಿ ಅವರ ಸಹೋದರ ಕೆ.ರಾಧಾಕೃಷ್ಣ ನಾಯರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶಿವಕುಮಾರ್, ರಂಗಕರ್ಮಿ ರಾಮಚಂದ್ರ ದತ್ತ ಉಪಸ್ಥಿತರಿದ್ದರು.
ಐರೋಡಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ರಾಜಶೇಖರ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕ ಗಣಪತಿ ನಾಯಕ್ ಸ್ವಾಗತಿಸಿದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.