×
Ad

ಕುಂದಾಪುರದಲ್ಲಿ ಆಟೋ ರಿಕ್ಷಾ ಹಿಟ್ & ರನ್: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ದಾರುಣ ಮೃತ್ಯು

Update: 2025-01-22 19:41 IST

ಕುಂದಾಪುರ: ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಬಸ್ರೂರು ಮೂರುಕೈ ಸಮೀಪದ ವಡೇರಹೋಬಳಿ‌ ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಅಪಘಾತದ ಬಳಿಕ ರಿಕ್ಷಾ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು ಒಂದಷ್ಟು ಗಂಟೆಗಳ ಬಳಿಕ ಪೊಲೀಸ್ ಠಾಣೆಗೆ‌ ಹೋಗಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಇಲ್ಲಿನ ವಡೇರಹೋಬಳಿ ಬೆಟ್ಟಾಗರ ಮನೆ ನಿವಾಸಿ ಸೋಮಯ್ಯ (61) ಮೃತರು ಎಂದು ಗುರುತಿಸಲಾಗಿದೆ.

ಸೋಮಯ್ಯ ಅವರು ನಿತ್ಯ ಬೆಳಿಗ್ಗೆ ವಾಕಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಬುಧವಾರವೂ ವಾಕಿಂಗ್ ತೆರಳಿದ್ದ ವೇಳೆ ರಿಕ್ಷಾ ಅಪಘಾತ ನಡೆಸಿ ಪರಾರಿಯಾಗಿದ್ದು ಗಾಯಗೊಂಡು ಗದ್ದೆಗೆ ಬಿದ್ದ ಸೋಮಯ್ಯ ಮೃತಪಟ್ಟಿದ್ದಾರೆ. ಒಂದಷ್ಟು ಸಮಯದ ನಂತರ ಅದೇ ದಾರಿಯಲ್ಲಿ ಪಾದಚಾರಿಯಾಗಿ ಬರುತ್ತಿದ್ದ ಸೋಮಯ್ಯ ಅವರ ಸಂಬಂಧಿಯೊಬ್ಬರು ಗದ್ದೆಯಲ್ಲಿ ವ್ಯಕ್ತಿ ಬಿದ್ದಿರುವುದನ್ನು ಕಂಡಿದ್ದು ಪರಿಶೀಲಿಸಿದಾಗ ಸೋಮಯ್ಯ ಎಂದು ತಿಳಿದುಬಂದಿದೆ. ಕೂಡಲೇ ಮನೆಗೆ ತೆರಳಿ ಸುದ್ದಿ ಮುಟ್ಟಿಸಿ ಮರಳಿಬಂದು ಕುಟುಂಬಿಕರ ಜೊತೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಾಗಲೇ ಸೋಮಯ್ಯ ಮೃತಪಟ್ಟಿರುವುದು ತಿಳಿದುಬಂದಿದೆ.

ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾ ಚಾಲಕನ ಅಮಾನವೀಯತೆ: ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣದಿಂದ ಮುಂಜಾನೆ 6 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಕರೆದೊಯ್ಯುವಾಗ ಸೋಮಯ್ಯ ಅವರಿಗೆ ರಿಕ್ಷಾ ಢಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ತಿಳಿದರೂ ಕೂಡ ರಿಕ್ಷಾ ಚಾಲಕ ನಾರಾಯಣ ಎಂಬಾತ ರಿಕ್ಷಾ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಒಂದೊಮ್ಮೆ ಆತ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಅವರು ಬದುಕುವ ಸಾಧ್ಯತೆಗಳಿತ್ತು ಎನ್ನಲಾಗಿದೆ. ಬೆಳಿಗ್ಗೆ 9 ಗಂಟೆ ಬಳಿಕ ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಬಂದು ಅಪಘಾತದ ವಿಚಾರ ತಿಳಿಸಿ ತಪ್ಪೊಪ್ಪಿಕೊಂಡಿದ್ದಾನೆ. ರಿಕ್ಷಾ ಚಾಲಕನ ಅಮಾನವೀಯ ವರ್ತನೆ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News