ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಗೃಹ ಸಚಿವ ಡಾ.ಪರಮೇಶ್ವರ್
ಉಡುಪಿ, ಜ.23: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಸತ್ಯಕ್ಕೆ ದೂರವಾದ ವಿಚಾರವಾಗಿದೆ. ನಾವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ. ಯಾವುದೇ ದೊಡ್ಡ ಗಲಾಟೆಯಾಗಲಿ ಕೋಮು ಗಲಭೆಗಳಾಗಲಿ ನಡೆದಿಲ್ಲ. ಕಳ್ಳತನ, ದರೋಡೆ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ನಾವು ಮಾಡುತ್ತೇವೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತ ಇರುವಾಗ ರಾಜ್ಯದಲ್ಲಿ ಎಷ್ಟು ದರೋಡೆಯಾಗಿತ್ತು, ಎಷ್ಟು ಎಟಿಎಂ ಕಳ್ಳತನ ಆಗಿತ್ತು ಎಂಬ ಮಾಹಿತಿ ನನಗೆ ಇದೆ. ಅದನ್ನು ಸಂದರ್ಭ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದರು.
ಮಂಗಳೂರು ಸೊಸೈಟಿ ದರೋಡೆ ಪ್ರಕರಣದಲ್ಲಿ ಬ್ಯಾಂಕಿನ ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆ. ಅವರು ಸೆಕ್ಯೂರಿಟಿ ಇಟ್ಟು ಕೊಳ್ಳಬೇಕು. ಪೊಲೀಸರು ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿ, 12 ಕೋಟಿ ಚಿನ್ನ ಬಂಗಾರ ಹಣ ವಶಪಡಿಸಿ ಕೊಂಡಿದ್ದಾರೆ. ಬೀದರ್ ಪ್ರಕರಣವನ್ನು ಶೀಘ್ರವೇ ಬೇಧಿಸುತ್ತೇವೆ ಎಂದು ಅವರು ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಂತ್ರಸ್ತರ ಆತ್ಮಹತ್ಯೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳು ಸಣ್ಣ ಸಣ್ಣ ಏಜೆನ್ಸಿಗಳಿಗೆ ಸಣ್ಣ ಪ್ರಮಾಣದ ಹಣ ಹಂಚಲು ಅವಕಾಶ ಮಾಡಿಕೊಟ್ಟಿದ್ದಾರೆ. ಫೈನಾನ್ಸ್‌ನವರು ಹಣ ವಾಪಾಸ್ಸು ಬರಲಿಲ್ಲ ಎಂದು ಈ ರೀತಿ ಕೃತ್ಯ ಮಾಡುತ್ತಿದ್ದಾರೆ ಮತ್ತು ಗ್ರಾಹಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ದೈಹಿಕ ಹಲ್ಲೆ, ಆಸ್ತಿ ಮುಟ್ಟುಗೋಲು ಮಾಡುತ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಪೊಲೀಸರಿಗೆ ದೂರು ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ತುಮಕೂರು ತುಮುಲ ನೇಮಕಾತಿ ಗುಬ್ಬಿ ಶಾಸಕ ಆಕ್ರೋಶ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರಕಾರದಿಂದ ನಾಮನಿರ್ದೇಶನ ಮಾಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಾಡಿದ್ದೇನೆ. ರಾಜಣ್ಣ ಸಹಕಾರಿ ಸಚಿವರು ಕೂಡ ಇದ್ದಾರೆ. ಅವರು ಇಲಾಖೆ ಅವರು ಕೂಡ ಸೇರಿ ಮಾಡಿದ್ದೇವೆ. ಅಧ್ಯಕ್ಷರನ್ನು ಸದಸ್ಯರು ಸೇರಿ ಆಯ್ಕೆ ಮಾಡುತ್ತಾರೆ. ಅದನ್ನು ಸದಸ್ಯರು ಮಾಡಿಕೊಂಡಿದ್ದಾರೆ. ನಾವು ಯಾರು ಕೂಡ ಈ ಪ್ರಕ್ರಿಯೆಯಲ್ಲಿ ಭಾಗಿ ಯಾಗಿಲ್ಲ ಎಂದರು.
‘ಬಿಜೆಪಿ ಒಳಜಗಳಕ್ಕೂ ನಮಗೂ ಸಂಬಂಧ ಇಲ್ಲ’
ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದಾ ರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ರಾಜಕೀಯ ಹೇಳಿಕೆಯನ್ನು ನೀಡುವುದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ರಾಜಕೀಯ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಒಳ ಜಗಳಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಅದು ಅವರ ಆಂತರಿಕವಾದ ವಿಚಾರವಾಗಿದೆ ಎಂದು ಸಚಿವ ಡಾ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕಾರು ಗುಂಪುಗಳಿವೆ ಎಂದು ಬಿಜೆಪಿಯವರು ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಬಾಗಿಲು, ಪಕ್ಷ ಒಡೆದು ಹೋಗಿ ಚೂರು ಚೂರು ಆಗಿದೆ ಎಂದು ಹೇಳುತ್ತಿದ್ದರು. ಆದರೆ ಈಗ ನಾವು ಕೂಡ ಅವರನ್ನು ನಿಮ್ಮ ಪಕ್ಷ ಎಷ್ಟು ಚೂರಾಗಿದೆ ಎಂದು ಕೇಳಬಹುದಾಗಿದೆ. ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೆಚ್ಚು ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.