ಉಡುಪಿ ಮಹಾನಗರ ಪಾಲಿಕೆ ಪ್ರಸ್ತಾವಕ್ಕೆ ನಗರಸಭೆಯಿಂದ ಸಿದ್ಧತೆ: ಡಿಸಿ ವಿದ್ಯಾ ಕುಮಾರಿ
ಉಡುಪಿ: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ನಗರಸಭೆ ಆಡಳಿತ ಸಭೆ ಕರೆದು ವರದಿ ಸಿದ್ಧ ಪಡಿಸಿ, ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಅದನ್ನು ನಾವು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೆ ತಾಲೂಕು ಕಚೇರಿ ಜಾಗದಲ್ಲಿ ನಗರಸಭೆ ಹೊಸ ಕಟ್ಟಡವನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರ ಸಮೀಪದಲ್ಲಿರುವ ಎಸಿ ಕಚೇರಿ ಜಾಗವನ್ನು ಕೂಡ ನಗರಸಭೆ ಕೊಡಲು ಒಪ್ಪಿಗೆ ಕೊಟ್ಟಿದ್ದೇವೆ. ಮುಂದೆ ಎಸಿ ಕಚೇರಿಯನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುವುದು ಎಂದರು.
ಅದೇ ರೀತಿ ಅಲ್ಲೇ ಸಮೀಪದಲ್ಲಿರುವ ಡಿವೈಎಸ್ಪಿ ಕಚೇರಿ ಸ್ಥಳ ಭವಿಷ್ಯದಲ್ಲಿ ಪಾರ್ಕಿಂಗ್‌ಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಡಿವೈಎಸ್ಪಿ ಕಚೇರಿಗೆ ಬೇರೆ ಪರ್ಯಾಯ ಕಟ್ಟಡ ನೀಡಿದರೆ ಸ್ಥಳಾಂತರ ಮಾಡಲು ಎಸ್ಪಿಯವರು ಒಪ್ಪಿಗೆ ಕೊಟ್ಟಿದ್ದಾರೆ. ಈ ಹೊಸ ಕಟ್ಟಡವನ್ನು ಮಹಾನಗರ ಪಾಲಿಕೆಯನ್ನೇ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇಲ್ಲಿರುವ ಜೈಲು ಕಟ್ಟಡವನ್ನು ಇಲ್ಲೇ ಉಳಿಸಬೇಕೆಂದು ಕೆಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಸ್ಥಳಾಂತರ ಎಲ್ಲಿಗೆ ಮಾಡುವುದು ಎಂಬುದು ಕೂಡ ಪ್ರಶ್ನೆಯಾಗಿದೆ. ಪುರಾತತ್ವ ಇಲಾಖೆಯವರು ಈ ಜಾಗ ನೀಡುವಂತೆ ನಮಗೆ ಪತ್ರ ಕೂಡ ಬರೆದಿದ್ದಾರೆ. ಮುಂದೆ ಅವರು ಈ ಕಟ್ಟಡ ವನ್ನು ಮ್ಯೂಸಿಯಂ ಆಗಿ ಪರಿವರ್ತನೆ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಆ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮಂಕಿ ಪಾಕ್ಸ್ ಆತಂಕ ಬೇಡ: ಬೆಂಗಳೂರಿನಿಂದ ಬಂದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಈ ವರದಿಯಲ್ಲಿ ಮಂಕಿ ಪಾಕ್ಸ್ ದೃಢಪಟ್ಟಿದೆ. ಆ ವ್ಯಕ್ತಿ ನೇರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವುದರಿಂದ ಈ ಕಾಯಿಲೆ ಯಾರಿಗೂ ಹರಡಿಲ್ಲ. ಆದುದರಿಂದ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಡಿಸಿ ಹೇಳಿದರು.
ಅವರ ಸಂಬಂಧಿಕರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಯಾವುದೇ ಕಾಯಿಲೆ ಕಂಡುಬಂದಿಲ್ಲ. ಇದೀಗ ಆ ವ್ಯಕ್ತಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆರೋಗ್ಯಕರವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾಹಿತಿ ನೀಡಿದರು.
‘ಕಲ್ಸಂಕ ತಾತ್ಕಾಲಿಕ ಬಂದ್ ಹೊರತು ಶಾಶ್ವತ ಅಲ’
ಕಲ್ಸಂಕ ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆಯೇ ಹೊರತು ಶಾಶ್ವತವಾಗಿ ಅಲ್ಲ. ಇಲ್ಲಿ ಶಾಶ್ವತವಾಗಿ ಬಂದ್ ಮಾಡುವುದಾದರೇ ಮಾತ್ರ ನೋಟೀಫಿಕೇಶನ್ ಹೊರಡಿಸಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.
ಈ ಬಂದ್ ಎಲ್ಲಿಯವರೆಗೆ ಮುಂದುವರೆಸಬೇಕಾಗುತ್ತದೆ ಎಂಬುದನ್ನು ಪೊಲೀಸರೇ ತೀರ್ಮಾನ ಮಾಡಬೇಕು. ಕೆಲವರು ಈ ವ್ಯವಸ್ಥೆಯ ಬಗ್ಗೆ ಒಳ್ಞಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆಲವರಿಗೆ ಅನುಕೂಲ ವಾದರೆ, ಇನ್ನು ಕೆಲವರಿಗೆ ಅನಾನುಕೂಲ ಆಗಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಇದಕ್ಕೆ ಪರಿಹಾರ ಏನು ಎಂಬುದನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದರು.
ಕಲ್ಸಂಕ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಸಂಬಂಧ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದ್ದು, ಈ ಕುರಿತು ಸೂಚನೆ ಶೀಘ್ರವೇ ಹೊಸದಾಗಿ ಟೆಂಡರ್ ಕರೆದು ಅನುಷ್ಠಾನ ಮಾಡುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.