ಕರ್ನಾಟಕ ಕ್ರೀಡಾಕೂಟ| ಜಾಫರ್ ಖಾನ್, ನಿಯೋಲೆ ಕೂಟದ ‘ಶ್ರೇಷ್ಠ ಅತ್ಲೀಟ್’
ಉಡುಪಿ, ಜ.23: ಬೆಂಗಳೂರಿನ ಗಗನ್ ಎಲ್.ಗೌಡ ಹಾಗೂ ನಿಯೋಲೆ ಅನ್ನಾ ಕಾರ್ನೆಲಿಯೋ ಅವರು ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟ-2025ರ ಅತ್ಲೆಟಿಕ್ ವಿಭಾಗದ 100ಮೀ. ಸ್ಪ್ರಿಂಟ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕೂಟದ ವೇಗದ ಓಟಗಾರರಾಗಿ ಮೂಡಿಬಂದರು.
ಅತ್ಯಂತ ರೋಚಕ ಹಾಗೂ ಅತ್ಯಂತ ನಿಕಟವಾಗಿ ಮುಕ್ತಾಯಗೊಂಡ ಪುರುಷರ 100ಮೀ. ಓಟದಲ್ಲಿ ಗಗನ್ ಅವರು 0.01ಸೆ. ಅಂತರದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿ ಚಾಮರಾಜನಗರದ ರವಿಕಿರಣ್ ಅವರನ್ನು ಹಿಂದೆ ಸರಿಸಿ ಗುರಿಮುಟ್ಟುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ರವಿಕಿರಣ್ ಅವರು ಸಹ ದಕ್ಷಿಣ ಕನ್ನಡದ ಸುಜನ್ ಥಾಮಸ್‌ರನ್ನು 0.01ಸೆ.ನಿಂದ ಹಿಂದಿಕ್ಕಿ ಬೆಳ್ಳಿಪದಕ ಪಡೆದರು.
ಪುರುಷರ 100ಮೀ. ಓಟದಲ್ಲಿ ಈ ಕೂಟದ ಅತ್ಯಂತ ರೋಚಕ ಸ್ಪರ್ಧೆ ಕಂಡುಬಂತು. ಓಟದ ಪ್ರಾರಂಭದಿಂದಲೇ ಗಗನ್, ರವಿಕಿರಣ್ ಹಾಗೂ ಸುಜನ್ ನಡುವೆ ಮುನ್ನಡೆಗಾಗಿ ಭಾರೀ ಪ್ರಯತ್ನ ಕಂಡುಬಂತು. ಮೂವರು ಒಂದೇ ಕ್ಷಣದಲ್ಲಿ ಗುರಿಮುಟ್ಟಿದಂತೆ ಕಂಡುಬಂದರೂ, ಕೊನೆಯ ಕೆಮರಾ ಕಣ್ಣಿನ ಮೂಲಕ ಕ್ರೀಡಾಕೂಟದ ತಾಂತ್ರಿಕ ಅಧಿಕಾರಿಗಳು ಹಲವು ಬಾರಿ ಪರಿಶೀಲಿಸಿ ಅಂತಿಮವಾಗಿ ಪದಕ ವಿಜೇತರ ಹೆಸರುಗಳನ್ನು ಪ್ರಕಟಿಸಿದರು.
ಮಹಿಳೆಯರ 100ಮೀ.ನಲ್ಲಿ ನಿಯೋಲೆ ಅವರ ಮೇಲುಗೈ ಸ್ಪಷ್ಟವಿತ್ತು. ಉಡುಪಿಯ ಸ್ತುತಿ ಪಿ.ಶೆಟ್ಟಿ ನಿಕಟ ಸ್ಪರ್ಧೆ ನೀಡಲು ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ವಿಫಲರಾದರು. ಈಗಾಗಲೇ 200ಮೀ.ನಲ್ಲೂ ಬೆಳ್ಳಿ ಪದಕ ಗೆದ್ದಿರುವ ಸ್ತುತಿ ಸ್ಪ್ರಿಂಟ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು.
ಉಳಿದಂತೆ ಪುರುಷರ ಹೈಜಂಪ್‌ನಲ್ಲಿ 1.85ಮೀ. ಎತ್ತರ ನೆಗೆದ ಉಡುಪಿಯ ಸಿನನ್ ಅವರು ಜಯಿಸಿದರೆ, ಗುಂಡನ್ನು 15.66ಮೀ. ದೂರ ಎಸೆದ ಪ್ರಜ್ವಲ್ ಶೆಟ್ಟಿ ಉಡುಪಿಗೆ ಮತ್ತೊಂದು ಚಿನ್ನದ ಪದಕ ನೀಡಿದರು.
ದಿನದ ಅತ್ಲೆಟಿಕ್ಸ್ ಫಲಿತಾಂಶ: ಪುರುಷರ ವಿಭಾಗ
100ಮೀ.: ಗಗನ್ ಎಲ್.ಗೌಡ ಬೆಂಗಳೂರು (10.63ಸೆ.), 2.ರವಿಕಿರಣ್ ಚಾಮರಾಜನಗರ, 3.ಶಿಜನ್ ಥಾಮಸ್ ದಕ್ಷಿಣ ಕನ್ನಡ.
400ಮೀ. ಹರ್ಡಲ್ಸ್:1.ಭೂಷಣ ಸುನಿಲ್ ಪಾಟೀಲ್ ಬೆಳಗಾವಿ (53.81ಸೆ.), 2.ರಾಹುಲ್ ನಾಯಕ್ ಎನ್. ಮೈಸೂರು, 3.ಭಾಗ್ಯವಂತ ಎನ್. ಕಲಬುರ್ಗಿ.
5,000ಮೀ.:1.ಸಂದೀಪ್ ಟಿ.ಎಸ್. ತುಮಕೂರು (15ನಿ.00.07ಸೆ.), 2.ವೈಭವ ಮಾರುತಿ ಪಾಟೀಲ್ ಬೆಂಗಳೂರು, 3.ಗುರುಪ್ರಸಾದ್ ತುಮಕೂರು.
ಹೈಜಂಪ್:1.ಸಿನನ್ ಉಡುಪಿ(1.85ಮೀ.), 2.ಭವಿತ್‌ಕುಮಾರ್ ಉಡುಪಿ, 3.ಕೆ.ಆರ್.ಯಶ್ವಿನ್ ದಕ್ಷಿಣ ಕನ್ನಡ.
ಶಾಟ್‌ಪುಟ್: 1.ಪ್ರಜ್ವಲ್ ಎಂ.ಶೆಟ್ಟಿ ಉಡುಪಿ (15.66ಮೀ.), 2.ಮುಹಮ್ಮದ್ ಸಕ್ಲೇನ್ ಅಹ್ಮದ್ ಮೈಸೂರು, 3.ಮನುಷ್ ಬಿ. ಮೈಸೂರು.
ಮಹಿಳೆಯರ ವಿಭಾಗ
100ಮೀ.:1.ನಿಯೋಲೆ ಅನ್ನಾ ಕಾರ್ನೆಲಿಯೊ ಬೆಂಗಳೂರು (11.93ಸೆ.), 2.ಸ್ತುತಿ ಪಿ.ಶೆಟ್ಟಿ ಉಡುಪಿ, 3.ವರ್ಷಾ ವಿ. ಬೆಂಗಳೂರು.
400ಮೀ. ಹರ್ಡಲ್ಸ್: 1.ದಿಕ್ಷೀತಾ ರಾಮಕೃಷ್ಣ ಗೌಡ, ಉತ್ತರಕನ್ನಡ (1ನಿ.03.1ಸೆ.), 2.ಅಪೂರ್ವ ಆನಂದ ನಾಯ್ಕ್ ಬೆಳಗಾವಿ, 3.ಅರ್ನಿಕಾ ವರ್ಷಾ ಡಿಸೋಜ ಉಡುಪಿ.
5000ಮೀ.:1.ತೇಜಸ್ವಿನಿ ಎನ್.ಎಲ್. ಕೊಡಗು (19ನಿ.27.20ಸೆ.), 2.ಪ್ರಣಾಮ್ಯ ಎನ್. ಶಿವಮೊಗ್ಗ, 3.ಶುಭಾಂಗಿ ಪ್ರಮೋದ್ ಕಾಕತ್ಕರ್ ಬೆಳಗಾವಿ.
ಹೈಜಂಪ್: 1.ಪಲ್ಲವಿ ಎಸ್.ಪಾಟೀಲ್ ಯಾದಗಿರಿ (1.76ಮೀ.), 2.ಎಸ್.ಬಿ.ಸುಪ್ರಿಯಾ ಚಿಕ್ಕಮಗಳೂರು, 3.ಎಫ್.ವಿ.ಮೊಂತೆರೋ ದಕ್ಷಿಣ ಕನ್ನಡ.