×
Ad

ಕಾರ್ಪೋರೇಟ್ ಚಮಚಾಗಳಿಗೆ ಬಜೆಟ್: ಸುರೇಶ್ ಕಲ್ಲಾಗರ

Update: 2025-02-01 20:37 IST

ನಿರ್ಮಲಾ ಸೀತಾರಾಮನ್‌ | PC : PTI

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ಕಾರ್ಪೊರೇಟ್ ಚಮಚಾಗಳಿಗೆ ಮತ್ತು ಶ್ರೀಮಂತರಿಗಾಗಿಯೇ ತಯಾರಿಸಿದ, ಬಡವರ-ವಿರೋಧಿ ಬಜೆಟ್. ರೈತರು, ಕಾರ್ಮಿಕರು ಮತ್ತು ಬಡವರ ಜೀವನೋಪಾಯದ ಮೇಲಿನ ಆಕ್ರಮಣ. ಜಿಡಿಪಿಗೆ ಕೃಷಿ ಮತ್ತು ಸಂಬಂಧಿತ ವಲಯಗಳ ಕೊಡುಗೆ ಬಜೆಟ್‌ನಲ್ಲಿ 16 ಪ್ರತಿಶತಕ್ಕೆ ಏರಿದೆ. ಆದರೆ 2024-25ರ ಪರಿಷ್ಕೃತ ಅಂದಾಜುಗಳಿಗಿಂತ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಂಚಿಕೆ ಕಡಿಮೆಯಾಗಿದೆ. 2024-25ರ ಪರಿಷ್ಕೃತ ಅಂದಾಜುಗಳು ರೂ. 376720.41 ಕೋಟಿಗಳು 2025-26 ರ ಹಂಚಿಕೆ ಕೇವಲ ರೂ. 371687.35 ಕೋಟಿ. ಹಣದುಬ್ಬರವನ್ನು ಲೆಕ್ಕ ಹಾಕಿದಾಗ, ಇದು ಹಂಚಿಕೆಯಲ್ಲಿ ಭಾರಿ ಕಡಿತವಾಗಿದೆ. 2020-21 ರಿಂದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೈಜ ವೆಚ್ಚಗಳು ಸ್ಥಿರವಾಗಿ ಕುಸಿದಿವೆ; ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈತರಿಗೆ ಆದ್ಯತೆ ಇಲ್ಲ ಎಂಬುದು ಇದರಿಂದ ಸ್ಪಷ್ಟ. ಇದೇ ಫೆಬ್ರವರಿ 5ರಂದು ದೇಶಾದ್ಯಂತದ ರೈತ ವಿರೋಧಿ ಬಜೆಟ್ ಪ್ರತಿಗಳನ್ನು ಸುಟ್ಟುಹಾಕಲು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.

-ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡುಪಿ.

ದುಡಿಯುವ ವರ್ಗಕ್ಕೆ ನಿರಾಶೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಇಂದು ಮಂಡಿಸಿದ ಬಜೆಟ್ ದುಡಿಯುವ ವರ್ಗದ ಕಾರ್ಮಿಕರಿಗೆ ಹಾಗೂ ಬಡಜನರಿಗೆ ನಿರಾಶೆ ತಂದಿದೆ. ಮೀನುಗಾರಿಕೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ಯಾವುದೇ ಘೋಷಣೆ ಇಲ್ಲ. ಶ್ರೀಮಂತ ಕಂಪೆನಿಗಳಿಗೆ ಬಜೆಟ್ ಮತ್ತಷ್ಟು ಉತ್ತೇಜನ ನೀಡಿದಂತಿದೆ.

-ಕವಿರಾಜ್‌ಎಸ್.ಕಾಂಚನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಉಡುಪಿ.

ಬಿಹಾರ ರಾಜ್ಯಕ್ಕಾಗಿ ತಯಾರಿಸಿದ ಬಜೆಟ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕೇವಲ ಬಿಹಾರ ರಾಜ್ಯವನ್ನು ವಿಶೇಷ ಗಮನದಲ್ಲಿಟ್ಟುಕೊಂಡು ತಯಾರಿಸಿದ ಬಜೆಟ್. ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಇದರಲ್ಲಿ ಮುಂಬರುವ ಬಿಹಾರ ಚುನಾವಣೆ ಹಾಗೂ ತಮ್ಮ ಮಿತ್ರ ಪಕ್ಷ ಜೆಡಿಯುಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಹೊರತು ದೇಶದಲ್ಲಿ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಬಜೆಟ್‌ನಲ್ಲಿ ಯಾವುದೇ ಯೋಜನೆಗಳಿಲ್ಲ. ಕರ್ನಾಟಕಕ್ಕೆ ನಯಾ ಪೈಸೆ ನೀಡಿಲ್ಲ. ಬಜೆಟ್ ನಿಂದ ಸಂಪೂರ್ಣ ನಿರಾಸೆ.

-ರಮೇಶ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಡುಪಿ.

ರೈತ ವಿರೋಧಿ ಕೇಂದ್ರ ಬಜೆಟ್

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ ಅನ್ನಿಸುತ್ತಿದೆ. ಈ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಬಿಹಾರ ಜನರ ಒಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಬಜೆಟ್‌ನಲ್ಲಿ ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ನಮ್ಮ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್.

-ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ.

ಮಧ್ಯಮ ವರ್ಗ, ಬಡವರ ಪಾಲಿಗೆ ಅತ್ಯುತ್ತಮ ಬಜೆಟ್

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಈ ಬಾರಿಯ ಬಜೆಟ್ ವಿಕಸಿತ ಭಾರತದ ಕಲ್ಪನೆಗೆ ಒತ್ತುಕೊಡುವ ಮಧ್ಯಮ ವರ್ಗ ಮತ್ತು ಬಡವರ ಪಾಲಿಗೆ ಅತ್ಯುತ್ತಮ ಬಜೆಟ್. 12 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಮಧ್ಯಮ ವರ್ಗಕ್ಕೆ ಬಹುದೊಡ್ಡ ಕೊಡುಗೆ. ಜೀವ ರಕ್ಷಕ ಔಷಧಿಗಳ ಮೇಲೆ ತೆರಿಗೆ ವಿನಾಯಿತಿ, ಮೀನುಗಾರಿಕಾ ರಫ್ತು ಉದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು, ಕರಾವಳಿ ಬಂದರುಗಳ ಅಭಿವೃದ್ಧಿಗೆ ನೆರವು, ಕಿಸಾನ್ ಕಾರ್ಡ್ ಮೊತ್ತವನ್ನು 3 ರಿಂದ 5 ಲಕ್ಷಕ್ಕೆ ಏರಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಉದ್ಯಮ ಸ್ಥಾಪನೆಗೆ ಎರಡು ಕೋಟಿವರೆಗಿನ ಸಾಲ ಸೌಲಭ್ಯದ ಘೋಷಣೆ, ರೈತಾಪಿ ವರ್ಗದ ವಿವಿಧ ಬೆಳೆಗಳಿಗೆ ನೀಡುವ ಆರ್ಥಿಕ ಸಹಾಯ, ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಕ್ರಮ, ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಂಜೂರಾತಿಗೆ ಕ್ರಮ, ಪ್ರವಾಸೋದ್ಯಮದ ದೃಷ್ಟಿಯಿಂದ ಕಾನೂನು ಬದ್ಧ ಹೋಂ ಸ್ಟೇಗಳಿಗೆ ಮುದ್ರಾ ಸಾಲ ವಿಸ್ತರಣೆ ಮುಂತಾದ ಅನೇಕ ಯೋಜನೆ ಗಳನ್ನು ಕೇಂದ್ರ ಸರಕಾರ ಬಜೆಟ್ ಮೂಲಕ ಘೋಷಿಸಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕಿಗೆ ಶಕ್ತಿ ತುಂಬಲಿದೆ.

-ಕೋಟ ಶ್ರೀನಿವಾಸ ಪೂಜಾರಿ,ಉಡುಪಿ-ಚಿಕ್ಕಮಗಳೂರು ಸಂಸದ.

ಬಡತನ ಮುಕ್ತ ಭಾರತ ನಿರ್ಮಾಣದತ್ತ ಚಿತ್ತ

2025-26ನೇ ಸಾಲಿನ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಬಡವರು, ಯುವಕರು, ರೈತರು ಹಾಗೂ ಮಹಿಳೆಯರ ಏಳಿಗೆಗಾಗಿ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಧನ್‌ಧಾನ್ಯ ಕೃಷಿ ಯೋಜನೆ ಅಡಿಯಲ್ಲಿ ಕಡಿಮೆ ಇಳುವರಿ ಇರುವ ರಾಷ್ಟ್ರದ ನೂರು ಜಿಲ್ಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರಿಂದ ಸುಮಾರು 1.7 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಮೂರು ಯೂರಿಯಾ ಪ್ಲಾಂಟ್‌ಗಳ ನಿರ್ಮಾಣ. ಕೃಷಿ ಕಾರ್ಡ್ ಲೋನ್ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಮೀನುಗಾರರ ವಲಯಕ್ಕೆ 60,000 ಕೋಟಿ ಅನುದಾನ. ಕೃಷಿ ಉತ್ಪನ್ನಗಳ ಹೆಚ್ಚಳ ಮಾಡಲು ಆದ್ಯತೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ರೂ 5 ಲಕ್ಷ ಸಾಲ ನೀಡುವ ಯೋಜನೆ ಘೋಷಣೆ. ಯುವಕರ ಏಳಿಗೆಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿಗೆ 20,000 ಕೋಟಿ, ಐಐಟಿ, ಐಐಎಫ್ಸಿ ಗಳ ಅನುದಾನ ಹೆಚ್ಚಳ. ಶಿಕ್ಷಣ ಕ್ಷೇತ್ರದಲ್ಲಿ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಅಳವಡಿಕೆಗೆ 500 ಕೋಟಿ ಮೀಸಲು. ‘ಮೇಕ್ ಫಾರ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್’ ಧ್ಯೇಯದೊಂದಿಗೆ ಐಐಟಿ, ವೈದ್ಯಕೀಯ ಕಾಲೇಜುಗಳಲ್ಲಿ ಶೇ.100ರಷ್ಟು ಹೆಚ್ಚುವರಿ ಸೀಟು. ಒಟ್ಟಾರೆ ದೇಶದ ಅಭಿವೃದ್ಧಿಗಾಗಿ ಮಾಡಿದ ಬಜೆಟ್ ಇದಾಗಿದ್ದು, ವಿಕಸಿತ ಭಾರತ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

-ಬಿ.ವೈ. ರಾಘವೇಂದ್ರ, ಶಿವಮೊಗ್ಗ ಲೋಕಸಭಾ ಸದಸ್ಯ.

ಸಮಗ್ರ ಅಭಿವೃದ್ಧಿಯ ಬಜೆಟ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ತೆರಿಗೆ, ಇಂಧನ ವಲಯ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ, ನಿಯಂತ್ರಕ ಸುಧಾರಣೆಗಳು ಹೀಗೆ 6 ಕ್ಷೇತ್ರಗಳನ್ನಾಗಿ ವಿಭಾಗಿಸಿ ಮಂಡಿಸಲಾದ ಬಜೆಟ್ ಜನಸ್ನೇಹಿಯಾಗಿದೆ. ಮೀನುಗಾರಿಕೆಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ರೈತರಿಗೆ ಈ ಬಜೆಟ್ ವರದಾನವಾಗಿದೆ. 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಿಸಿರುವುದು ಕ್ರಾಂತಿಕಾರಕ ನಿರ್ಧಾರ. ಇದು ಮಧ್ಯಮ ವರ್ಗಕ್ಕೆ ವರವಾಗಿ ಪರಿಣಮಿಸಿದೆ.

-ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ.

ವಿಕಸಿತ ಭಾರತದ ಆರ್ಥಿಕತೆಗೆ ಮುನ್ನುಡಿ

ವಿಕಸಿತ ಭಾರತದ ಸದೃಢ ಆರ್ಥಿಕತೆಗೆ ಈ ಬಾರಿಯ ಬಜೆಟ್ ಮುನ್ನುಡಿ ಬರೆಯಲಿದೆ. ಮುಂದಿನ 5 ವರ್ಷಗಳಲ್ಲಿ ಸಬ್ ಕಾ ವಿಕಾಸ್ ಆಶಯ ಸಾಕಾರ ಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿ ಮಧ್ಯಮ ವರ್ಗದ ಜನತೆಗೆ ಆರ್ಥಿಕ ಹೊರೆ ಇಳಿಸಲಾಗಿದೆ. ನಗರಾಭಿವೃದ್ಧಿಗೆ 1 ಲಕ್ಷ ಕೋಟಿ, ಮೀನುಗಾರಿಕಾ ವಲಯಕ್ಕೆ 60 ಸಾವಿರ ಕೋಟಿ, ಜಲಜೀವನ ಮಿಶನ್ ಯೋಜನೆ 2028ವರೆಗೆ ವಿಸ್ತರಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 5 ಲಕ್ಷಕ್ಕೆ ಏರಿಕೆ, ರಾಜ್ಯಗಳಿಗೆ ಬಡ್ಡಿರಹಿತ ಸಾಲಕ್ಕೆ 1.50 ಲಕ್ಷ ಕೋಟಿ ಮೀಸಲು, ಗ್ರಾಮೀಣ ಶಾಲೆಗಳಿಗೆ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ, ಕ್ಯಾನ್ಸರ್ ಸಹಿತ ಮಾರಣಾಂತಿಕ ಕಾಯಿಲೆಗಳ ಔಷಧಿಗಳ ತೆರಿಗೆ ಕಡಿತ ಮಾಡುವ ಮೂಲಕ ಅಭಿವೃದ್ಧಿಗೆ ಪೂರಕ ಜನಸಾಮಾನ್ಯರ ಬಜೆಟ್‌ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

-ಯಶಪಾಲ್ ಎ.ಸುವರ್ಣ, ಉಡುಪಿ ಶಾಸಕ.

ಬಜೆಟ್‌ನಲ್ಲಿ ರಾಜ್ಯದ ಅವಗಣನೆ

ಮೂಲಭೂತ ಸೌಕರ್ಯದಲ್ಲಿ ಬಹಳಷ್ಟು ಉದ್ಯೋಗ ಸೃಷ್ಟಿ ಎಂಬ ಹೇಳಿಕೆಗೆ ಪೂರಕ ಯೋಜನೆಗಳನ್ನು ರೂಪಿಸಲು ಬಜೆಟ್ ವಿಫಲವಾಗಿದೆ. ಎಲ್ಲಾ ವಸ್ತುಗಳ ಬೆಲೆಗಳು ಈಗಾಗಲೇ ಏರಿಕೆ ಕಂಡಿದ್ದು ಆದಾಯ ತೆರಿಗೆ ವಿನಾಯತಿಯನ್ನು 12ಲಕ್ಷ ಕ್ಕೆ ಏರಿಸಿದನ್ನು ಬಿಟ್ಟರೆ ಮಧ್ಯಮ ವರ್ಗಕ್ಕೆ ಬೇರೆ ಯಾವುದೇ ಲಾಭವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ, ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಅನುದಾನ ಬಿಡುಗಡೆಗೊಳಿಸದೆ ಕೇಂದ್ರ ಸರಕಾರ ಕರ್ನಾಟಕಕ್ಕೆ ದ್ರೋಹ ಎಸಗಿದೆ.

ಅಶೋಕ್‌ಕುಮಾರ್ ಕೊಡವೂರು, ಅಧ್ಯಕ್ಷ ಉಡುಪಿ ಜಿಲ್ಲಾ ಕಾಂಗ್ರೆಸ್

ಕರ್ನಾಟಕಕ್ಕೆ ನಿರಾಶದಾಯಕ ಬಜೆಟ್

ಬಜೆಟ್ ಪೂರ್ವ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆ ಕಂಡಿದ್ದು ಜನರ ವಿರೋಧವನ್ನು ತಣಿಸಲು ಕೇಂದ್ರ ತೆರಿಗೆ ವಿನಾಯಿತಿಯನ್ನು 12 ಲಕ್ಷದವರೆಗೆ ಏರಿಸಿದೆ. ಬಜೆಟ್ ಮಧ್ಯಮ ವರ್ಗಕ್ಕೆ ಹೊರೆಯಾಗಿಲ್ಲ ಎನ್ನುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಅತೀ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಯಾವುದೇ ಯೋಜನೆಗಳನ್ನು ನೀಡಿಲ್ಲ. ಬಜೆಟ್ ನಲ್ಲಿ ಆಂಧ್ರ ಮತ್ತು ಬಿಹಾರ ಗಳಿಗೆ ನೀಡಿದ ಅನುದಾನ ಗಮನಿಸಿದರೆ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದಂತೆ ಕಾಣುತ್ತದೆ. ಕರ್ನಾಟಕದ ಅವಗಣನೆ, ಮಿತ್ರ ಪಕ್ಷಗಳಿಗೆ ಆದ್ಯತೆ ಬಿಟ್ಟರೆ ಬಜೆಟ್‌ನಲ್ಲಿ ವಿಶೇಷತೆ ಇಲ್ಲ.

-ಭಾಸ್ಕರ ರಾವ್ ಕಿದಿಯೂರು, ವಕ್ತಾರರು ಉಡುಪಿ ಜಿಲ್ಲಾ ಕಾಂಗ್ರೆಸ್

ಮಧ್ಯಮ ವರ್ಗಕ್ಕೆ ಸಂತೃಪ್ತಿ ತಂದ ಬಜೆಟ್

ಈ ಬಾರಿಯ ಕೇಂದ್ರ ಸರ್ಕಾರ ಮಂಡಿಸಿದ ಆಯ ವ್ಯಯ ಲೆಕ್ಕಾಚಾರ ಬಹುಮುಖ್ಯವಾಗಿ ಮಧ್ಯಮ ವರ್ಗವನ್ನು ಖುಷಿಪಡಿಸಿದೆ ಅನ್ನುವುದು ಬಜೆಟ್‌ನ ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ. ಬಹುಮುಖ್ಯವಾಗಿ ವೇತನ ಪಡೆಯುವವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿರುವುದು ಸಂತಸ ತಂದಿದೆ. ಆದರೆ ಇಡಿ ಬಜೆಟ್‌ನಲ್ಲಿ ಬಿಹಾರಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದು ಎದ್ದು ಕಾಣುತ್ತದೆ.ಇದು ಪ್ರಾದೇಶಿಕ ಅಸಮತೋಲನದ ಭಾವ ಸೃಷ್ಟಿ ಮಾಡುತ್ತದೆ. ಐಐಟಿ; ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ವಿಸ್ತರಣೆ, 50 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಕರ್ಯ ...ಇವೆಲ್ಲವೂ ಕೇಂದ್ರ ಸರಕಾರದಲ್ಲಿ ನಿತೀಶ್ ಕುಮಾರ್ ಪ್ರಭಾವ ಎಷ್ಟಿದೆ ಅನ್ನುವುದಕ್ಕೆ ನಿದರ್ಶನವೆಂದೇ ಹೇಳಬಹುದು. ಹೀಗಾಗಿ ಪ್ರಾದೇಶಿಕ ಅಸಮತೋಲನ ಬಜೆಟ್ ಹಂಚಿಕೆ ಎದ್ದು ಕಾಣುತ್ತಿದೆ. ಅಂಗನವಾಡಿ ಪರಿಸರ ಪರಿಕರಗಳ ಬಗ್ಗೆ ಒತ್ತು ಕೊಡಲಾಗಿದೆ ಹೊರತು ಅಂಗನವಾಡಿ ಕಾರ್ಯಕರ್ತರ ಬದುಕಿನ ಬಗ್ಗೆ ಎಲ್ಲೂ ಕೂಡಾ ಉಲ್ಲೇಖವೇ ಇಲ್ಲ. ಮಕ್ಕಳ ಆಟಿಕೆಗಳ ಉತ್ಪಾದನೆಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ ಆದರೆ ಗುಣಮಟ್ಟದ ಸುಧಾರಣೆಗೆ ಯಾವುದೇ ಮಹತ್ವ ನೀಡಿಲ್ಲ. ಹಿರಿಯ ನಾಗರಿಕರ ಟಿಡಿಎಸ್ ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಿರುವುದು ಹಿರಿಯ ಹೆಚ್ಚಿನ ನೆಮ್ಮದಿ ತಂದಿದೆ. ಒಟ್ಟಿನಲ್ಲಿ ಸಮಿಶ್ರ ಸರಕಾರದ ಬಜೆಟ್ ಸಮಿಶ್ರವಾದ ಸಂತೃಪ್ತಿ ತಂದಿದೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಉಡುಪಿ.

ಯಾಂತ್ರಿಕವಾಗಿ ಸಿದ್ಧಪಡಿಸಿದ ಬಜೆಟ್

ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಯಾಂತ್ರಿಕವಾಗಿ ಸಿದ್ಧಪಡಿಸಿದ ಬಜೆಟ್. ಸಾರ್ವಜನಿಕರಿಗೆ ಯಾವುದೇ ನೇರ ತೆರಿಗೆ ಕಡಿತಗಳ ಪ್ರಯೋಜನ ವಿಲ್ಲ. ಸಬ್ಸಿಡಿಗಳ ಕಡಿತ, ನಿರುದ್ಯೋಗ, ಬಡತನ ನಿರ್ಮೂಲನೆಗೆ ಪರರಿಹಾರ ಸೂಚಿಸಿಲ್ಲ. ಆರ್ಥಿಕ ಅಸಮಾನತೆ ಹೆಚ್ಚಲಿದೆ. ನಮ್ಮ ರಾಜ್ಯಕ್ಕೆ ಎಂದಿನಿಂತೆ ಯಾವುದೇ ಪರಿಣಾಮಕಾರಿ ಘೋಷಣೆಗಳಿಲ್ಲ.

-ಹರಿಪ್ರಸಾದ್ ರೈ, ಕಾಂಗ್ರೆಸ್ ನಾಯಕ ಉಡುಪಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News