ಸರಕಾರಿ ಬಸ್ ಸ್ವಾಗತಿಸಲು ಸಜ್ಜಾಗಿದ್ದ ಗ್ರಾಮಸ್ಥರಿಗೆ ನಿರಾಸೆ!
ಉಡುಪಿ: ಕೋಡಿಬೆಟ್ಟು ಗ್ರಾಪಂ ವ್ಯಾಪ್ತಿಯ ಅಂಗಾರಕಟ್ಟೆಗೆ ಸರಕಾರಿ ಬಸ್ ಸಂಚಾರ ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಭಾರೀ ನಿರಾಸೆಯಾಗಿದೆ. ಹಲವು ವರ್ಷಗಳ ಬೇಡಿಕೆ ಈಡೇರಿದ ಖುಷಿಯಲ್ಲಿ ಬಸ್ಸನ್ನು ಇಂದು ಸ್ವಾಗತಿಸಲು ಸಜ್ಜಾದ ಗ್ರಾಮಸ್ಥರು ಬಸ್ ಬಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ - ಮೂಡುಬೆಳ್ಳೆ ಮಾರ್ಗದಲ್ಲಿ ವಿಸ್ತರಣೆಯಾಗಿ ಕೋಡಿಬೆಟ್ಟು ಗ್ರಾಪಂ ವ್ಯಾಪ್ತಿಯ ಗುಂಡುಪಾದೆ, ಅಂಗಾರಕಟ್ಟೆ ಹೆಲ್ತ್ ಸೆಂಟರ್‌ವರೆಗೆ ಸರಕಾರಿ ಬಸ್ ಸಂಚಾರ ಫೆ.೩ರಂದು ಆರಂಭವಾಗುವ ಬಗ್ಗೆ ಕೆಎಸ್‌ಆರ್‌ಟಿಸಿ ಯಿಂದ ಅಧಿಕೃತ ವಾಗಿ ಮಾಹಿತಿ ನೀಡಲಾಗಿತ್ತು. ಅದರಂತೆ ಗ್ರಾಮಸ್ಥರು ಹಲವು ವರ್ಷಗಳ ಬಳಿಕ ಬೇಡಿಕೆ ಈಡೇರಿದ ಖುಷಿಯಲ್ಲಿ ಸರಕಾರಿ ಬಸ್ಸನ್ನು ಸ್ವಾಗತಿಸಲು ಸಜ್ಜಾಗಿದ್ದರು.
ಅದಕ್ಕಾಗಿ ಬಸ್‌ಗೆ ಸ್ವಾಗತ ಕೋರುವ ಬ್ಯಾನರ್ ಅಳವಡಿಸಿದ್ದರು. ಗುಂಡು ಪಾದೆ ಹಾಗೂ ಅಂಗಾರಕಟ್ಟೆಯಲ್ಲಿ ಗ್ರಾಮಸ್ಥರು ಬಸ್ಸಿಗೆ ಕಟ್ಟಲು ಬಾಳೆ, ಶೃಂಗಾರ ಮಾಡಲು ಹೂವು ತೆಗೆದುಕೊಂಡು ಸನ್ನದ್ಧರಾಗಿದ್ದರು. ಆದರೆ ತಾಂತ್ರಿಕ ಕಾರಣದಿಂದ ಸರಕಾರಿ ಬಸ್ ಈ ಮಾರ್ಗದಲ್ಲಿ ಸಂಚರಿಸದೆ ಗ್ರಾಮಸ್ಥರಿಗೆ ಹಾಗೂ ಪ್ರಯಾಣಿಕರಿಗೂ ನಿರಾಸೆ ಉಂಟು ಮಾಡಿದೆ. ತಾಂತ್ರಿಕ ದೋಷದಿಂದ ಇಂದು ಬಸ್ ಸಂಚರಿಸಲು ಸಾಧ್ಯವಾಗಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನದ ನಂತರ ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತ ಗೊಳಿಸಿರುವುದರಿಂದ ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಸಾಕಷ್ಟು ಪ್ರಯತ್ನದ ನಂತರ ಸರಕಾರಿ ಬಸ್ ಈ ಮಾರ್ಗದಲ್ಲಿ ಓಡಾಟಕ್ಕೆ ಎಲ್ಲ ರೀತಿಯ ಅಧಿಕೃತ ವ್ಯವಸ್ಥೆಗಳು ಮಾಡಲಾಗಿತ್ತು. ಆದರೆ ಇದೀಗ ತಾಂತ್ರಿಕ ಕಾರಣವೊಡ್ಡಿ ಬಸ್ ಬಾರದೆ ಇರುವುದು ಗ್ರಾಮಸ್ಥರಿಗೆ ಸಾಕಷ್ಟು ಬೇಸರ ತಂದಿದೆ.
ಉಡುಪಿ- ಓಂತಿಬೆಟ್ಟು ಮಾರ್ಗವಾಗಿ ಪೆರ್ಲಂಕಿಲ ಶ್ರೀಮಹಾಗಣಪತಿ ದೇವಸ್ಥಾನದ ತನಕ ಸರಕಾರಿ ಬಸ್ಸು ಸಂಚರಿಸ ಬೇಕೆಂದು ಸ್ಥಳೀಯ ನಿವಾಸಿಗಕಳ ಕೋರಿಕೆ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು, ಹಾಗೂ ಕಾಂಗ್ರೆಸ್ ಮುಖಂಡ ಮೋಹನ್‌ದಾಸ್ ನಾಯಕ್ ಪರ್ಕಳ ಉಡುಪಿಯ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದರು. ಈಗ ಮೂಡುಬೆಳ್ಳೆ ಮೂಲಕವಾದರೂ ಸರಕಾರಿ ಬಸ್ ಸಂಚರಿಸಬಹುದೆಂಬ ನಿರೀಕ್ಷೆಯಲ್ಲಿದ್ದರು.