ಅನಧಿಕೃತ ಪ್ರಾಣಿ ಪಾರುಗಾಣಿಕಾ ಕೇಂದ್ರಕ್ಕೆ ಸಾಕುಪ್ರಾಣಿಗಳನ್ನು ಬಿಡದಂತೆ ಸೂಚನೆ
ಉಡುಪಿ, ಫೆ.3: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನೊಂದಣಿ ಯಿಲ್ಲದೆ ಬ್ರಹ್ಮಾವರ ತಾಲೂಕು ಕೆರೆಕಟ್ಟೆ ಮನೆಯ ಬಿ.ಸುದೀಂದ್ರ ಐತಾಳ್ ಇವರು ಅನಧಿಕೃತವಾಗಿ ಪ್ರಾಣಿಗಳ ಪಾರುಗಾಣಿಕಾ ಕೇಂದ್ರವನ್ನು (ಎನಿಮಲ್ ರೆಸ್ಕ್‌ಯು ಸೆಂಟರ್) ನಡೆಸುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆ, ಆಹಾರ, ನೀರು, ಸ್ವಚ್ಛತೆ, ಲಸಿಕೆ, ಚಿಕಿತ್ಸೆ ಇತ್ಯಾದಿ ದಾಖಲೆಗಳು ಇರುವುದಿಲ್ಲ. ಆದ್ದರಿಂದ ಇದು ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಉಲ್ಲಂಘನೆಯಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಆದ್ದರಿಂದ ಸಾರ್ವಜನಿಕರು ಈ ಪ್ರಾಣಿಗಳ ಪಾರುಗಾಣಿಕೆ ಕೇಂದ್ರದಲ್ಲಿ ಇನ್ನು ಮುಂದೆ ನಾಯಿ, ಬೆಕ್ಕು, ಮುದ್ದಿನ ಪಕ್ಷಿಗಳು ಇತ್ಯಾದಿಗಳನ್ನು ನೀಡಬಾರದು. ಅನಾಥ, ಅಂಗವಿಕಲ ಮತ್ತು ಅನಾರೋಗ್ಯ ಪ್ರಾಣಿಗಳಿಗೆ ಚಿಕಿತ್ಸೆ, ಆಹಾರ ನೀಡಿ ತನ್ನದೇ ಸಮುದಾಯ ವ್ಯಾಪ್ತಿಯಲ್ಲಿ ರಕ್ಷಣೆ ಮಾಡಬೇಕು. ಸರ್ಕಾರೇತರ ಸಂಸ್ಥೆಗಳು/ಸ್ಥಳೀಯ ಸಂಸ್ಥೆಗಳು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಾನುಸಾರ ಪುನರ್ವಸತಿ ಕಲ್ಪಿಸಬಹುದಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.