ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಕೆ ಅತೀ ಅಗತ್ಯ: ನಾಗರಾಜ ಕೆದ್ಲಾಯ
ಉಡುಪಿ, ಫೆ.8: ರೈತ ಸಮಾವೇಶಗಳು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣ ವಾಗಬೇಕು. ಕೃಷಿಯಲ್ಲಿ ಮಾರು ಕಟ್ಟೆ ವ್ಯವಸ್ಥೆ ಇಲ್ಲದಿದ್ದರೆ ರೈತರು ಉಳಿಯಲು ಸಾಧ್ಯ ಇಲ್ಲ. ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಕ್ಕಿದರೆ ಮಾತ್ರ ಪ್ರಗತಿ ಸಾಧ್ಯ. ಅದಕ್ಕೆ ಹೊಸ ತಾಂತ್ರಿಕತೆಯನ್ನು ಹಳ್ಳಿಹಳ್ಳಿಗಳಿಗೆ ಒದಗಿಸಬೇಕಾಗಿದೆ ಎಂದು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಎಸ್.ನಾಗರಾಜ ಕೆದ್ಲಾಯ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಈಸೀ ಲೈಫ್ ಎಂಟರ್‌ಪ್ರೈಸಸ್, ಪುತ್ತೂರು ಎಸ್.ಆರ್.ಕೆ.ಲ್ಯಾಡರ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಸಾಧಕ ಕೃಷಿಕರಾದ ಶ್ರೀನಿವಾಸ ಆಚಾರ್ಯ ಬೈಲೂರು, ಲಾರೆನ್ಸ್ ಆಳ್ವ ಮೂಡುಬೆಳ್ಳೆ, ಕಮಲ ಪೂಜಾರಿ ಮೂಡುಪೆರಂಪಳ್ಳಿ, ಸತ್ಯಶಂಕರ ಶೆಟ್ಟಿ ಸಚ್ಚೇರಿಪೇಟೆ, ವಾಸುದೇವ ಪ್ರಭು ಹಿರಿಯಡ್ಕ, ರಾಜೇಶ್ ಪೂಜಾರಿ, ಪ್ರೇಮಾನಂದ ಕುಲಾಲ್ ಹೊರನಾಡಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ವಾದಿರಾಜ ಭಟ್ ಕೆ., ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್.ಶಶಿಧರ್ ರಾವ್, ಈಸೀ ಲೈಫ್‌ನ ರವಿನಾರಾಯಣ, ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಆಮೈ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ವಹಿಸಿದ್ದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡಿಸಿದರು. ಭಾರತಿ ಶೆಟ್ಟಿ ವಂದಿಸಿದರು.
ಸಮಾವೇಶದಲ್ಲಿ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ತರಕಾರಿ ಗಳು, ಕೃಷಿ ಸಂಬಂಧಿ ಪುಸ್ತಕಗಳ ಮಳಿಗೆಗಳಿದ್ದವು.
"ಬ್ರಹ್ಮಾವರ ಸಕ್ಕರೆ ಕಾರ್ಖಾನೆ ರಾಜಕೀಯ ಬಿಕ್ಕಟ್ಟಿನಿಂದ ಇನ್ನೂ ತೆರೆಯದೆ ಹಾಗೆ ಉಳಿದುಕೊಂಡಿದೆ. ಈ ಕಾರ್ಖಾನೆ ಯಿಂದ ಕಬ್ಬು ಬೆಳೆಸುವ ರೈತರಿಗೆ ಹಾಗೂ ಕೆಲಸ ಮಾಡುವ ಕಾರ್ಮಿಕರಿಗೂ ತುಂಬಾ ಅನುಕೂಲವಾಗುತ್ತಿತ್ತು. ಮುಚ್ಚಿದ ಕಾರ್ಖಾನೆ ತೆರೆಯಲು ನಮ್ಮ ಜನಪ್ರತಿನಿಧಿ ಯಾವುದೇ ರೀತಿಯಲ್ಲೂ ಪ್ರಯತ್ನ ಮಾಡುತ್ತಿಲ್ಲ. ಅವರ ಹೇಳಿಕೆಗಳು ಕೇವಲ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದರೆ ಸಕ್ಕರೆ ಕಾರ್ಖಾನೆ ಯಾವತ್ತೋ ಆರಂಭವಾಗುತ್ತಿತ್ತು".
-ಶ್ರೀನಿವಾಸ ಭಟ್ ಕುದಿ, ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಕೃಷಿಕ ಸಂಘ