ಉಡುಪಿ ಜಿಲ್ಲೆಯೇ ಕಮ್ಯುನಿಟಿ ಪೊಲೀಸಿಂಗ್‌ನ ಬುನಾದಿ: ಡಾ.ಎಂ.ಎ.ಸಲೀಂ
ಉಡುಪಿ, ಫೆ.8: ಕಮ್ಯುನಿಟಿ ಪೊಲೀಸಿಂಗ್‌ನ ಬುನಾದಿ ಉಡುಪಿ ಜಿಲ್ಲೆಯಾಗಿದೆ. 2000ರಲ್ಲಿ ಮಹಿಳಾ ಮತ್ತು ಮಕ್ಕಳ ಸಹಾಯವಾಣಿಯನ್ನು ಇಡೀ ರಾಜ್ಯಕ್ಕೆ ಮೊದಲ ಬಾರಿಗೆ ಉಡುಪಿ ಜಿಲ್ಲೆ ಪರಿಚಯಿಸಿತು. ಇದರಿಂದ ಪೊಲೀಸರು ಮತ್ತು ಸಾರ್ವಜನಿಕ ನಡುವಿನ ಅಂತರ ಕಡಿಮೆ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಸಾಧ್ಯವಾಯಿತು. ಇದೊಂದು ದಿಟ್ಟ ಹೆಜ್ಜೆಯಾಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಯಿತು ಎಂದು ಬೆಂಗಳೂರು ಸಿಐಡಿಯ ಡಿಜಿಪಿ ಡಾ.ಎಂ.ಎ.ಸಲೀಂ ಹೇಳಿದ್ದಾರೆ.
ಉಡುಪಿ ಜಿಲ್ಲೆಯ 2000ನೇ ಬ್ಯಾಚಿನ ಸಿವಿಲ್ ಮತ್ತು ಡಿಎಆರ್ ಸಿಬ್ಬಂದಿ ಗಳು ಪೊಲೀಸ್ ಇಲಾಖೆಯಲ್ಲಿ 25 ವರ್ಷ ಪೂರೈಸಿದ ಪ್ರಯುಕ್ತ ಉಡುಪಿ ಮಿಷನ್ ಕಂಪೌಂಡ್‌ನ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ರಜತ ಮಹೋತ್ಸವ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಶಾಂತಿ ಸುವ್ಯವಸ್ಥೆ ಇಲ್ಲದಿದ್ದೆ ಯಾವುದೇ ಸಮಾಜ ಕೂಡ ಪ್ರಗತಿ ಕಾಣಲು ಸಾಧ್ಯ ಇಲ್ಲ. ಸಮಾಜದ ಬೆಳವಣಿಗೆಗೆ ಸುರಕ್ಷಿತ ವಾತಾವರಣ ಅತೀ ಅಗತ್ಯವಾಗಿದೆ. ಅದರಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ. ಅದಕ್ಕೆ ಪೊಲೀಸರು ಉತ್ತಮ ರೀತಿಯ ತಬೇತಿಯನ್ನು ಪಡೆದು ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪ್ರತಿದಿನ ಸವಾಲು ಎದುರಿಸಬೇಕು. ರಾತ್ರಿ ಹಗಲು ಕರ್ತವ್ಯ ನಿರ್ವಹಿಸುವ ಪೊಲೀಸರಿಂದ ನಾವು ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ. ಪೊಲೀಸರು ತಮ್ಮ ಒತ್ತಡದ ಕೆಲಸದ ಮಧ್ಯೆಯೂ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ವಹಿಸಿದ್ದರು. ಈ ಸಂದರ್ಭದಲ್ಲಿ 2000ರಲ್ಲಿ ಉಡುಪಿ ಜಿಲ್ಲಾ ಎಸ್ಪಿಯಾಗಿದ್ದ ಡಾ.ಸಲೀಂ ಹಾಗೂ ಬೆಂಗಳೂರು ಕೆಎಸ್‌ಪಿಎಸ್ ಇದರ ನಿವೃತ್ತ ಎಸ್ಪಿ ಎಂ.ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯಾಲ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಯುಬಿಎಂಸಿ ಟ್ರಸ್ಟ್ ಅಸೋಸಿಯೇಶನ್ ಚೆಯರ್‌ಮೆನ್ ಜಯಪ್ರಕಾಶ್ ಸೈಮನ್ ಉಪಸ್ಥಿತರಿದ್ದರು.
2000ನೆ ಬ್ಯಾಚಿನ ಸಿವಿಲ್ ಹೆಚ್‌ಸಿ ರಾಘವೇಂದ್ರ ಸ್ವಾಗತಿಸಿದರು. ಆರ್ಮ್ಡ್ ಹೆಚ್‌ಸಿ ಶಶಿಧರ್ ಶೆಟ್ಟಿ ಹಾಗೂ ಆರ್ಮ್ಡ್ ಹೆಚ್‌ಸಿ ಮಧುಸೂಧನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಆರ್ಮ್ಡ್ ಹೆಚ್‌ಸಿ ಶೇಖರ್ ವಂದಿಸಿದರು. ನಿವೃತ್ತ ಎಸ್ಸೈ ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.