×
Ad

‘ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು’

Update: 2025-02-08 19:14 IST

ಉಡುಪಿ, ಫೆ.8: ಸರಕಾರ ಎಲ್ಲಾ ಸಹಕಾರಿ ಸಂಘಗಳಲ್ಲಿ ತಲಾ ಎರಡು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಇದನ್ನು ಬಳಸಿಕೊಂಡು ಮಹಿಳೆಯರೂ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚುಚ್ಚು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಹೇಳಿದ್ದಾರೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಗಳ ಸಹಯೋಗ ದೊಂದಿಗೆ ಕಡಿಯಾಳಿಯ ದಿ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ ಮಹಿಳಾ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಎನಿಸಿಕೊಂಡಿದೆ.ಇಲ್ಲಿನ ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿ ಗಿಂತಲೂ ಉತ್ತಮವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿವೆ. ಅವು ಜನಸ್ನೇಹಿಯಾಗಿದೆ. ಹೀಗಾಗಿ ಇವು ಸದೃಢವಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹ ಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸರಕಾರ ಇಂದು ಪ್ರತಿ ಸಹಕಾರ ಸಂಘಗಳಲ್ಲಿ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮೂಲಕ ಸಂಘದ ಎಲ್ಲಾ 13 ಸ್ಥಾನಗಳನ್ನು ಮಹಿಳೆ ಯರು ತುಂಬಲು ಅವಕಾಶವಾಗಿದೆ. ಇದರ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.

ಸಹಕಾರ ಸಂಘಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇಂಥ ತರಬೇತಿ ಶಿಬಿರ ಗಳಲ್ಲಿ ಪಾಲ್ಗೊಳ್ಳುವುದರಿಂದ ಅಂಥ ಸಮಸ್ಯೆಗಳನ್ನು ಧೈರ್ಯದಿಂದ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಮಹಿಳಾ ಸಹಕಾರಿಗಳಿಗೆ ಅವರು ಕಿವಿಮಾತು ಹೇಳಿದರು.

ಮೂಡಬಿದರೆಯ ಕೆಐಸಿಎಂನ ಪ್ರಾಂಶುಪಾಲರಾದ ಡಾ.ವಿಶ್ವೇಶ್ವರಯ್ಯ ಸಭೆ ಯನ್ನುದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿರುವ ಮೈಸೂರು ಮಾನಸ ಗಂಗೋತ್ರಿಯ ಮೈಸೂರು ವಿವಿಯ ಜೆನೆಟಿಕ್ಸ್ ಆ್ಯಂಡ್ ಜಿಯೋಮಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎಸ್.ಮಾಲಿನಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ಸಿದ್ಧರಾಮಣ್ಣ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷರಾದ ಅಶೋಕಕುಮಾರ್ ಬಲ್ಲಾಳ್, ನಿರ್ದೇಶಕರಾದ ಅರುಣ್ ಕುಮಾರ್ ಹೆಗ್ಡೆ, ಕರುಣಾಕರ ಶೆಟ್ಟಿ, ಸುಧೀರ್‌ಕುಮಾರ್ ವೈ, ಶ್ರೀಧರ ಪಿ.ಎಸ್. ಭಾಗವಹಿಸಿದ್ದರು.

ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಅಲೆವೂರು ಹರೀಶ್ ಕಿಣಿ ಅತಿಥಿಗಳನ್ನು ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಂಪ್ಯೂಟರ್ ಪ್ರೋಗ್ರಾಮರ್ ಸುಕನ್ಯ ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News