×
Ad

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆಯ ಕಾರಿಗಾಗಿ ಬ್ಯಾಂಕಿನ ಅರ್ಜಿಗೆ ಆಕ್ಷೇಪ

Update: 2025-02-08 20:39 IST

 ಪ್ರವೀಣ್ ಚೌಗುಲೆ

ಉಡುಪಿ, ಫೆ.8: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡುವಂತೆ ಸಂಬಂಧಪಟ್ಟ ಬ್ಯಾಂಕಿನವರು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು.

ಶುಕ್ರವಾರ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ತನ್ನ ವಾದ ಮಂಡಿಸಿದರು. ಆರೋಪಿ ಕೃತ್ಯ ಎಸಗಿದ ಹಿಂದಿನ ದಿನ ಅದೇ ಕಾರಿನಲ್ಲಿ ಹೆಜಮಾಡಿ ಟೋಲ್ ಮೂಲಕ ಸಂತೆಕಟ್ಟೆ ಕಡೆಗೆ ಹೋಗಿರುವುದರಿಂದ ಸಾಕ್ಷ್ಯ ವಿಚಾರಣೆ ಸಂದರ್ಭ ಟೋಲ್ ಸಿಬ್ಬಂದಿ ಕಾರನ್ನು ಗುರುತಿಸಬೇಕಾಗಿದೆ. ಅದೇ ರೀತಿ ಸಾಕ್ಷ್ಯ ಸಂದರ್ಭ ಬೇರೆ ಬೇರೆ ಸಾಕ್ಷಿಗಳಿಗೆ ಕಾರು ಅಗತ್ಯವಾಗಿರುವುದರಿಂದ ಬ್ಯಾಂಕಿನ ವಶಕ್ಕೆ ನೀಡದಂತೆ ಆಕ್ಷೇಪಣೆ ಸಲ್ಲಿಸಿದರು.

ಬ್ಯಾಂಕಿನ ಪರ ವಕೀಲರು ವಾದ ಮಂಡಿಸಲು ಸಮಯಾವಕಾಶವನ್ನು ಕೇಳಿದರು. ಅದರಂತೆ ನ್ಯಾಯಾಧೀಶ ಸಮಿವುಲ್ಲಾ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿ ಆದೇಶ ನೀಡಿದರು. ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News