×
Ad

ಕ್ಯಾನ್ಸರ್ ಬಾಧಿತರಿಗೆ ‘ಟಾರ್ಗೆಟ್ ಥೆರಪಿ ಚಿಕಿತ್ಸೆ’: ಡಾ.ವೆಂಕಟೇಶ್

Update: 2025-02-10 19:52 IST

ಉಡುಪಿ, ಫೆ.10: ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ನಾಗರಿಕರು ಭಯಪಡುವುದನ್ನು ಬಿಡಬೇಕು. ಕ್ಯಾನ್ಸರ್ ಬಾಧಿತರಿಗೆ ‘ಟಾರ್ಗೆಟ್ ಥೆರಪಿ ಚಿಕಿತ್ಸೆ’ಯನ್ನು ನೀಡುವ ಮೂಲಕ ಸುದೀರ್ಘ ಅವಧಿಯವರೆಗೆ ಬದುಕಿಸಿ ಕೊಳ್ಳುವ ಚಿಂತನೆ ನಡೆಯುತ್ತಿದೆ. ಕ್ಯಾನ್ಸರ್ ರೋಗಿಗಳನ್ನು ಐದು ವರ್ಷಗಳ ಕಾಲ ತೀವ್ರ ನಿಗಾದಲ್ಲಿರಿಸಿ ಕಾಯಿಲೆ ಮರುಕಳಿಸದಿದ್ದಲ್ಲಿ ಶೇ.90ರಷ್ಟು ಗುಣಮುಖರನ್ನಾಗಿ ಮಾಡಬಹುದು ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾಸ್ಪತ್ರೆಯ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಅಪ್ಪು ಅಭಿಮಾನಿಗಳ ಬಳಗ ಉಡುಪಿ ಇವರ ಸಹಯೋಗದೊಂದಿಗೆ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಎಲ್ಲಾ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಸೌಕರ್ಯಗಳನ್ನು ಬಳಸಿಕೊಂಡೇ ಚಿಕಿತ್ಸೆಯನ್ನು ನೀಡಲಾಗುವುದು ಎಂದ ಡಾ.ವೆಂಕಟೇಶ್, ಕ್ಯಾನ್ಸರ್ ಕುರಿತಂತೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರತ್ನ, ಕ್ಯಾನ್ಸರ್ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಮಾರಕ ರೋಗವಾಗಿದೆ. ಯಾವುದೇ ಕ್ಯಾನ್ಸರ್ ಆದರೂ ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು ಎಂದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳುಕೇವಲ ನಾಮಕಾವಸ್ಥೆಗೆ ಇರದೇ, ಅದನ್ನು ಪರಿಣಾಮಕಾರಿ ಯಾಗಿ ಜನಸಾಮಾನ್ಯ ರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ವಿಶೇಷ ಶ್ರಮವಹಿಸಬೇಕು ಎಂದರು.

ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಾಗೂ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಕ್ಯಾನ್ಸರ್‌ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವುಗಳನ್ನು ಗಮನಾರ್ಹ ವಾಗಿ ಕಡಿಮೆ ಮಾಡುವುದು ಈ ದಿನದ ಪ್ರಾಥಮಿಕ ಗುರಿಯಾಗಿದೆ ಎಂದರು.

ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಕ್ಯಾನ್ಸರ್ ಕಾಯಿಲೆ ಎಂದು ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ಅರಿವು ಮೂಡಿಸಿ ದ್ದಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಕಾಯಿಲೆ ಯನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು. ಮದ್ಯಪಾನ ಹಾಗೂ ಧೂಮಪಾನದಿಂದ ಪ್ರತಿಯೊಬ್ಬರೂ ದೂರವಿರುವಂತೆ ನೋಡಿಕೊಳ್ಳಬೇಕು. ನಶ್ಯ ಸೇವನೆಯಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಹಳ್ಳಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದವರು ಹೇಳಿದರು.

ಮಕ್ಕಳು ಚಿಕ್ಕಂದಿನಿಂದಲೇ ನಿರಂತರವಾದ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಂಡಾಗ, ಸಮತೋಲಿತ ಆಹಾರಗಳ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಕಾುಲೆಯಿಂದ ದೂರವಿರಲು ಸಾಧ್ಯವಿದೆ. 2-3ದಶಕಗಳ ಹಿಂದಿನವರೆಗೂ ಕ್ಯಾನ್ಸರ್‌ನ್ನು ಶ್ರೀಮಂತ ರಾಷ್ಟ್ರಗಳ ಕಾಯಿಲೆ ಎಂದು ಭಾವಿಸಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ವರಲ್ಲಿ ಈ ಕಾಯಿಲೆಯನ್ನು ಕಾಣುತ್ತಿದ್ದೇವೆ. ಕ್ಯಾನ್ಸರ್ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರಿಂದ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದರು.

ಸ್ತ್ರೀ ರೋಗ ಪ್ರಸೂತಿ ತಜ್ಞ ಡಾ.ಶಶಾಂಕ್ ಕಿಣಿ, ಮಹಿಳೆಯರಲ್ಲಿ ಕಂಡುಬರುವ ಗರ್ಭಕೋಶದ ಬಾಯಿಯ ಕ್ಯಾನ್ಸರ್ ಪತ್ತೆ ಹಚ್ಚುವ ಕುರಿತು, ಅದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರೆ, ಪುಷ್ಪಲತಾ ಅವರು ಆಯು ಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ನಡಿ ಲಭ್ಯವಿರುವ ಚಿಕಿತ್ಸೆ, ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ದಾಖಲೆ, ಸರಕಾರಿ ಆಸ್ಪತ್ರೆಗಳಲ್ಲಿ ರೆಫರಲ್ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್‌ನಡಿ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ಆಹಾರದ ಕಿಟ್ ಹಾಗೂ ನಗದನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ.ಸುಜಿತ್ ಹಾಗೂ ಡಾ. ಮಂಜುನಾಥ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಗಿರೀಶ್ ಕಡ್ಡಿಪುಡಿ, ಅಪ್ಪು ಅಭಿಯಾನಿ ಬಳಗದ ಪ್ರೀತಮ್ ಬಿ.ಎಸ್, ಎನ್‌ಸಿಡಿ ಕಾರ್ಯಕ್ರಮದ ಜಿಲ್ಲಾ ಸಮಾಲೋಚಕಿ ಡಾ. ಅಂಜಲಿ, ಆಪ್ತ ಸಮಾಲೋಚಕ ಮನು ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ಸ್ವಾಗತಿಸಿ, ಕ್ಷಯ ಘಟಕದ ಹಿರಿಯ ಆರೋಗ್ಯ ಮೇಲ್ವಿಚಾರಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಆಸ್ಪತ್ರೆಯ ಆವರಣದಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಜಾಥಾಕ್ಕೆ ಗಾಳಿಯಲ್ಲಿ ಬಲೂನ್ ಹಾರಿಬಿಡುವುದರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹೆಚ್ ಅಶೋಕ್ ಚಾಲನೆ ನೀಡಿದರು. ಜಾಥಾವು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಬ್ರಹ್ಮಗಿರಿಯವರೆಗೆ ನಡೆಯಿತು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News