ವಚನಗಳ ಮೂಲಕ ಸಮಾಜವನ್ನು ತಿದ್ದಿದವರು ವಚನಕಾರರು: ಡಿಸಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ, ಫೆ.10: 12ನೇ ಶತಮಾನದಲ್ಲಿದ್ದ ವಚನಕಾರರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವಲ್ಲಿ ಮುಂದಾಗಿದ್ದರು. ಈ ಎಲ್ಲಾ ವಚನಕಾರರ ವಚನಗಳನ್ನು ಹಾಗೂ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ಇಂದು ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ವಚನಕಾರರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ವಚನಗಳನ್ನು ನೀಡಿದ್ದಾರೆ. ಸಮಾನತೆ, ಭ್ರಾತೃತ್ವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವ ಜೊತೆಗೆ ತಾವು ಮಾಡುವ ಕಾಯಕದಲ್ಲಿ ದೇವರನ್ನೇ ಕಂಡುಕೊಂಡು ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮತ್ತು ಜ್ಞಾನವನ್ನು ಮೂಡಿಸುವ ಪ್ರಯತ್ನ ಅವರು ಮಾಡಿದ್ದರು ಎಂದರು.
ಒಳಗೊಂದು ಹೊರಗೊಂದು ಭಾವನೆಗಳನ್ನು ಹೊಂದಿರುವ ಪ್ರಸಕ್ತ ಸಮಾಜದಲ್ಲಿ, ವಚನಕಾರರು 800 ವರ್ಷಗಳ ಹಿಂದೆಯೇ ತಮ್ಮ ನೇರ ನಡೆನುಡಿಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು. 12ನೇ ಶತಮಾನದಲ್ಲಿದ್ದ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅವರಂತೆ ನಾವು ಕೂಡ ಈ ಎಲ್ಲಾ ಬಿಕ್ಕಟ್ಟನ್ನು ತೊಡೆದು ಹಾಕಲು ಆದ್ಯತೆ ನೀಡಬೇಕಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗಪೆದ್ದಿ ಮೊದಲಾದ ಕಾಯಕ ಶರಣರು ಜಾತಿ ಸಂಕೋಲೆಯಿಂದ ಹೊರಬಂದು ಸಮಾನತೆಯ ತತ್ವವನ್ನು ಪ್ರತಿಪಾದಿಸಿದರು. ಕಾಯಕ ಶರಣರು ಕಾಯಕವನ್ನು ಪ್ರೀತಿಸಿ ಗೌರವಿಸಿದರೆ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ನಂಬಿದ್ದರು ಎಂದರು.
ಈ ಎಲ್ಲಾ ವಚನಕಾರರು ಲೋಕಕ್ಕೆ ಕಾಯಕ ತತ್ವವನ್ನು ಪ್ರತಿಪಾದಿಸಿದರು. ತಾವು ಮಾಡುವ ವೃತ್ತಿಯಲ್ಲಿ ಪರಮಾತ್ಮ ನನ್ನು ಹುಡುಕಿದರೆ ಆಗ ಸದ್ಗತಿ ದೊರೆಯಲು ಸಾಧ್ಯ ಎಂದವರು ಪ್ರತಿಪಾದಿಸಿದ್ದರು. 12ನೇ ಶತಮಾನದ ವಚನ ಚಳುವಳಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿ ಪ್ರಭಾವ ಬೀರಿತ್ತು ಎಂದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರರಾದ ನವನೀತ್, ರಾಮಚಂದ್ರ ಭಟ್, ಶ್ರೀನಿಧಿ, ಜಾನಪದ ಕಲಾವಿದ ವಾಸು ಬನ್ನಂಜೆ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು.