ಯಕ್ಷ ಕಲಾವಿದ ಶ್ರೀನಿವಾಸರಿಗೆ ‘ಎಂ.ಎಂ.ಹೆಗ್ಡೆ ಪ್ರಶಸ್ತಿ’ ಪ್ರದಾನ
ಉಡುಪಿ: ಬಡಗುತಿಟ್ಟಿನ ಖ್ಯಾತನಾಮ ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ನಾಗೂರು ಅವರಿಗೆ ಇಂದ್ರಾಳಿ ಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ನಡೆದ ಯಕ್ಷಗಾನ ಕೇಂದ್ರದ 52ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ ಎಂ.ಎಂ.ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಇವ ಸಹಯೋಗ ದೊಂದಿಗೆ ನಡೆದ ಯಕ್ಷಗಾನ ಕೇಂದ್ರದ 52ನೇ ವಾರ್ಷಿಕೋತ್ಸವವನ್ನು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಕ್ಷಗಾನ ಎಂಬುದು ಬಹಳ ಪ್ರಾಚೀನವಾದ ರಂಗಕಲೆ. ಯಕ್ಷಗಾನದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಸಿಗುತ್ತದೆ. ವಿದ್ಯಾರ್ಥಿಗಳು ಶಾಲಾಶಿಕ್ಷಣದ ಜೊತೆಗೆ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂದ್ರಾಳಿ ಯಕ್ಷಗಾನ ಕೇಂದ್ರದ ಮೂಲಕ ವಿಶೇಷ ಪ್ರಯತ್ನ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ. ಮಾಹೆ ಈ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದರು.
ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಮಾತನಾಡಿ, ಶಿಕ್ಷಣದ ಜೊತೆಗೆ ಯಕ್ಷಗಾನವೂ ವಿದ್ಯಾರ್ಥಿ ಜೀವನದಲ್ಲಿ ಸಿಕ್ಕರೆ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಪೂರಕವಾಗಲಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಯಕ್ಷಗಾನದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ವರಿದ್ದೇವೆ ಎಂದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ ಯಕ್ಷಗಾನ ಕೇವಲ ಸಾಂಸ್ಕೃತಿಕ ಕಲೆಯಲ್ಲ. ದೈವಾರಾಧನೆಯ ಕಲೆಯೂ ಹೌದು. ಹೀಗಾಗಿ ಮಕ್ಕಳು ಇದರಲ್ಲಿ ಶೃದ್ದೆಯಿಂದ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ದಿ.ವಕೀಲ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕುಂದಾಪುರ ಇದರ ಅಧ್ಯಕ್ಷರಾದ ವೈ. ಸೀತಾರಾಮ ಶೆಟ್ಟಿ, ಎಂ.ಐ.ಟಿ ಪ್ರಾಧ್ಯಾಪಕ ಪ್ರೊ. ಉದಯ ಕುಮಾರ್ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ ಮಯ್ಯ, ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಯಾಗಿದ್ದ ಪ್ರವೀಣ್ ಕೊಪ್ಪಲ್ ಅವರನ್ನು ಗೌರಸಲಾಯಿತು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಕೇಂದ್ರದಲ್ಲಿ ತರಬೇತಿಗೊಂಡ ವಿವಿಧ ಹಂತಗಳ ಯಕ್ಷಗಾನದ ವಿದ್ಯಾರ್ಥಿಗಳಿಂದ ‘ಭೀಷ್ಮ ವಿಜಯ’ ಯಕ್ಷಗಾನ, ಕೇಂದ್ರದ ವಿದ್ಯಾರ್ಥಿಗಳಿಂದ ಹಿಮ್ಮೇಳ ವೈಭವ ನಡೆಯಿತು.