ಮುನಿಯಾಲು ಆಸ್ಪತ್ರೆಯಲ್ಲಿ ಕುಷ್ಠರೋಗ ಜಾಗೃತಿ ಶಿಬಿರ
ಉಡುಪಿ, ಫೆ.13: ಕುಷ್ಠ ರೋಗ ಮಾಸಾಚರಣೆಯ ಅಂಗವಾಗಿ ಮಣಿಪಾಲದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಗದ ತಂತ್ರ ವಿಭಾಗವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹ ಯೋಗದೊಂದಿಗೆ ಕುಷ್ಠ ರೋಗ ಜಾಗೃತಿ ಅಭಿಯಾನ ಹಾಗೂ ಚರ್ಮದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.
ಉಡುಪಿಯ ಜಿಲ್ಲಾ ಕುಷ್ಠರೋಗ ಅಧಿಕಾರಿ(ಡಿಎಲ್‌ಇಒ) ಡಾ. ಲತಾ ನಾಯಕ್ ಅವರು ಕುಷ್ಠ ರೋಗದ ಕುರಿತಂತೆ ಸಮಗ್ರ ಮಾಹಿತಿಗಳನ್ನು ನೀಡಿ, ಅವರ ಪತ್ತೆ, ತಪಾಸಣೆ ಹಾಗೂ ಚಿಕಿತ್ಸಾ ವಿಧಾನದ ಕುರಿತು ವಿವರಿಸಿದರು. ರೋಗದ ಕುರಿತಂತೆ ಇರುವ ಸಾಮಾಜಿಕ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿರುವ ಕ್ರಮವನ್ನು ವಿವರಿಸಿದರು.
ಡಾ.ಲತಾ ನಾಯಕ್ ಹಾಗೂ ಮತ್ತವರ ತಂಡದ ಸದಸ್ಯರಾದ ಭರತ್ (ಆರೋಗ್ಯ ತಪಾಸಣಾ ಅಧಿಕಾರಿ), ರಾಜು (ಪಾರಾಮೆಡಿಕಲ್), ಸಾಗರ್ (ಎಂಐಎಸ್ಸಿ ಸಿಬ್ಬಂದಿ), ಡಾ.ಶಾಮಿನಿಕುಮಾರ್ (ವೈದ್ಯಕೀಯ ಅಧಿಕಾರಿ) ಮತ್ತು ಪರಶು ರಾಮ್ (ಆರೋಗ್ಯ ತಪಾಸಣಾ ಅಧಿಕಾರಿ ಮಣಿಪಾಲ) ಇವರು ರೋಗದ ಸಮೀಕ್ಷೆ, ಮಾಹಿತಿ ಸಂಗ್ರಹಣೆ ಮತ್ತು ರೋಗಿಗಳ ತಪಾಸಣೆ ನಡೆಸುವ ಕುರಿತು ಮಾರ್ಗದರ್ಶನ ನೀಡಿದರು.
ಮಂಚಿ ಹಾಗೂ ಹುಡ್ಕೋ ಕಾಲೋನಿ ಪ್ರದೇಶಗಳಲ್ಲಿ ಕುಷ್ಠರೋಗದ ಕುರಿತು ಸಮೀಕ್ಷೆ ನಡೆಸಲು 50 ಮಂದಿ ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಅಲ್ಲದೇ ಮಣಿಪಾಲದಲ್ಲಿರುವ ಮುನಿಯಾಲು ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸಾಯನ್ಸ್‌ನಲ್ಲಿ ಫೆ.22ರವರೆಗೆ ಚರ್ಮರೋಗ ತಪಾಸಣಾ ಶಿಬಿರ ನಡೆಸಲಾ ಗುತ್ತಿದ್ದು, ಅಲ್ಲೂ ಈ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.