ರಾಷ್ಟ್ರೀಯ ಹೆದ್ದಾರಿ ಮರುಡಾಂಬರೀಕರಣ: ತೆಕ್ಕಟ್ಟೆ-ಬೀಜಾಡಿ ಸುಗಮ ಸಂಚಾರಕ್ಕೆ ತೊಡಕು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಅಲ್ಲಲ್ಲಿ ಹೊಂಡ-ಗುಂಡಿಗಳು, ಉಬ್ಬು-ತಗ್ಗುಗಳಿದ್ದ ಬಗ್ಗೆ ವಾಹನ ಸವಾರ ರಿಂದ ಹಲವಾರು ದೂರುಗಳು ಕೇಳಿಬರುತ್ತಿದ್ದು ಇತ್ತೀಚೆಗೆ ಕೆಲವು ಸಮಗಳಿಂದ ಮರುಡಾಂಬರೀಕರಣ ಮಾಡಲಾಗುತ್ತಿದೆ.
ಸದ್ಯ ತೆಕ್ಕಟ್ಟೆಯಿಂದ ಬೀಜಾಡಿಯವರೆಗೆ ಹೆದ್ದಾರಿಯಲ್ಲಿ ಮರುಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು ಏಕಮುಖ ಸಂಚಾರದ ಒಂದು ಕಡೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಿ ಮತ್ತೊಂದು ಕಡೆಯ ಹೆದ್ದಾರಿಯಲ್ಲಿಯೇ ದ್ವಿಮುಖ ಸಂಚಾರ ಕಲ್ಪಿಸಲಾಗಿದೆ. ಡಿವೈಡರ್ ಬಳಿ ಸೂಕ್ತ ತಿರುವು ಪಡೆಯಲು ವ್ಯವಸ್ಥೆ ಕಲ್ಪಿಸದ ಕಾರಣದಿಂದಾಗಿ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ತೆಕ್ಕಟ್ಟೆ, ಕುಂಭಾಶಿ ಹಾಗೂ ಬೀಜಾಡಿ ಡಿವೈಡರ್ ಬಳಿ ವಾಹನ ಸಂಚಾರ ಅಸ್ತವ್ಯಸ್ಥಗೊ ಳ್ಳುತ್ತಿದೆ. ಖಾಸಗಿ ಬಸ್ಸುಗಳ ಅಡ್ಡಾದಿಡ್ಡಿ ಚಾಲನೆ, ಘನ ವಾಹನಗಳ ಏಕಾಏಕಿ ತಿರುವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.
ರಾತ್ರಿ ವೇಳೆ ಬಾರೀ ಸಮಸ್ಯೆ: ಸದ್ಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಹುತೇಕ ಕಡೆ ಹೆದ್ದಾರಿ ದೀಪಗಳ ಅಳವಡಿಕೆ ಮೊದಲಿನಿಂದಲೂ ಇಲ್ಲ. ಇದೀಗಾ ಕಾಮಗಾರಿ ಸಲುವಾಗಿ ಒಂದು ಕಡೆ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿದ್ದು ರಸ್ತೆ ಮದ್ಯೆ ಟ್ಯಾಂಕ್‌ಗಳನ್ನಿಟ್ಟು (ಡ್ರಮ್) ದ್ವಿಪಥ ಮಾಡಲಾಗಿದೆ. ಹೆದ್ದಾರಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಟ್ಯಾಂಕ್‌ಗಳು ಸೈಕಲ್, ಬೈಕ್ ಹಾಗೂ ಲಘು ವಾಹನಗಳಿಗೆ ಕಾಣಿಸುವುದಿಲ್ಲ. ಅಲ್ಲದೆ ಘನ ವಾಹನಗಳು ಟ್ಯಾಂಕ್‌ಗಳನ್ನು ಹೊಡೆದು ಚೆಲ್ಲಾಪಿಲ್ಲಿಯಾಗಿಸಿ ಮತ್ತೊಂದಷ್ಟು ಅವಘಡಗಳಿಗೆ ಕಾರಣವಾಗುತ್ತಿದೆ.
"ಹದಗೆಟ್ಟ ಹೆದ್ದಾರಿಯನ್ನು ಸಮರ್ಪಕವಾಗಿಸುವುದು ಒಳ್ಳೆ ವಿಚಾರ. ಆದರೆ ಕಾಮಗಾರಿ ನಡೆಸುವಾಗ ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು ಹಾಗೆ ಸುಗಮ ಸಂಚಾರಕ್ಕೆ ತೊಡಕಾಗದಂತೆ ಗುತ್ತಿಗೆ ಕಂಪೆನಿ ಮುತುವರ್ಜಿ, ಮುಂಜಾಗೃತಾ ಕ್ರಮ ವಹಿಸಬೇಕು. ಸಂಬಂದಪಟ್ಟ ಇಲಾಖೆಯೂ ಈ ಬಗ್ಗೆ ಕ್ರಮಗೈಗೊಳ್ಳಬೇಕು. ಶೀಘ್ರ ಸರ್ವೀಸ್ ರಸ್ತೆ ನಿರ್ಮಾಣ, ಹೆದ್ದಾರಿ ದೀಪಗಳ ಅಳವಡಿಕೆಯೂ ಆಗಬೇಕು".
- ರಾಜು ಬೆಟ್ಟಿನಮನೆ, ಬೀಜಾಡಿ (ದಸಂಸ ಮುಖಂಡರು)