ಇಂಧನ ಮಿತಿ ಕಡಿತ: ಕರಾವಳಿ ಕಾವಲು ಪಡೆ ಸ್ಪಷ್ಟೀಕರಣ
ಉಡುಪಿ, ಫೆ.15: ದೃಶ್ಯ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪ್ರಿಂಟ್ ಮಾಧ್ಯಮಗಳಲ್ಲಿ ಫೆ.14 ಮತ್ತು 15ರಂದು ಕರಾವಳಿ ಕಾವಲು ಪಡೆಯ ಸಮುದ್ರ ಗಸ್ತು ಬೋಟುಗಳ ಬಳಕೆಯ ಇಂಧನ ಮಿತಿಯನ್ನು ಶೇ. 50ರಷ್ಟು ಕಡಿಮೆ ಮಾಡಲಾಗಿದೆ ಎಂದು ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ರೀತಿಯ ಯಾವುದೇ ಆದೇಶವನ್ನು ಸರಕಾರವಾಗಲಿ/ಪೊಲೀಸ್ ಇಲಾಖೆಯಾಗಲಿ ಹೊರಡಿಸಿಲ್ಲ ಎಂದು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮುದ್ರ ಗಸ್ತು ಬೋಟುಗಳಿಗೆ ಸಂಬಂಧಿಸಿದಂತೆ ಯಾವುದೇ ಇಂಧನ ಮಿತಿ ನಿರ್ದಿಷ್ಟಪಡಿಸಿರುವುದಿಲ್ಲ. ಇಲಾಖಾ ಬೋಟು ಗಳಿಗೆ ಇಂಧನ ವೆಚ್ಚಕ್ಕಾಗಿ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಮತ್ತು ನಿರಂತರವಾಗಿ ಸಮುದ್ರದಲ್ಲಿ ಗಸ್ತು ಕರ್ತವ್ಯ ನಡೆಸಲಾಗುತ್ತ್ತಿದೆ ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.
ಅಲ್ಲದೇ ಇಲಾಖಾ ವಾಹನಗಳಿಗೆ ಅಧಿಕಾರಿಗಳ ಕೋರಿಕೆಯ ಮೇರೆಗೆ ಅವಶ್ಯಕತೆಯ ಆಧಾರದ ಮೇಲೆ ಹೆಚ್ಚುವರಿ ಇಂಧನ ಬಳಸಲು ಸಹ ಅನುಮತಿ ನೀಡಲಾಗುತ್ತಿದೆ. ಆಂತರಿಕ ಭದ್ರತೆಗೆ ಸಂಬಂಧಿಸಿದ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡುವಂತೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.