ಕೈಗಾರಿಕಾ, ಪ್ರವಾಸೋದ್ಯಮ, ಡಿಜಿಟಲ್ ಉತ್ತೇಜನಕ್ಕೆ ಸರಕಾರದೊಂದಿಗೆ ಚರ್ಚೆ: ಎಂ.ಜಿ.ಬಾಲಕೃಷ್ಣ
ಉಡುಪಿ: ಕರಾವಳಿ ಕರ್ನಾಟಕದಲ್ಲಿ ಕೈಗಾರಿಕಾ ಕ್ಲಸ್ಟರ್ ಹಾಗೂ ಡಿಜಿಟಲ್ ಉದ್ಯಮಶೀಲತೆಗಳನ್ನು ಉತ್ತೇಜಿಸಲು ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ವಿಸ್ತರಿಸುವ ಕುರಿತು ಶೀಘ್ರವೇ ರಾಜ್ಯ ಸರಕಾರದೊಂದಿಗೆ ಚರ್ಚಿಸಲಾಗುವುದು. ಅದೇ ರೀತಿ ಕೈಗಾರಿಕಾ ನೀತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸರಳೀಕರಣ ಮಾಡುವ ಕುರಿತು ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಮೂಲ ಸೌರ್ಕಯವನ್ನು ಹೆಚ್ಚಿಸಬೇಕು. ರಾಜ್ಯ ಸರಕಾರ ತನ್ನ ಪ್ರವಾಸೋದ್ಯಮ ಕರಡು ನೀತಿಯಲ್ಲಿ ಉಡುಪಿ ಮತ್ತು ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉತ್ತಮ ರಸ್ತೆ ಜಾಲಗಳು, ವಿಮಾನ ನಿಲ್ದಾಣ ಮತ್ತು ರೈಲು ಸಂಪರ್ಕಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಉಡುಪಿ ಮತ್ತು ಕರಾವಳಿ ಕರ್ನಾಟಕ ವ್ಯಾಪಾರ ಸಮುದಾಯವು ಸರಕಾರವು ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಅನು ಕೂಲರ ವಾತಾವಣವನ್ನು ಸೃಷ್ಠಿಸ ಬೇಕಾಗಿದೆ. ಮೀನುಗಾರಿಕೆ, ಕೃಷಿ ಸಂಸ್ಕರಣೆ ಮತ್ತು ಸಾಗರ ರಪ್ತುಗಳಿಗೆ ಅಗತ್ಯವಾದ ನೀತಿ ಬೇಕಾಗಿದೆ. ಅದೇ ರೀತಿ ಕೈಗಾರಿಕ ಕಾರಿಡಾರ್‌ಗಳನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿಲಿಕಾನ್ ಸರ್ಫ್ -25 ಪರಿಕಲ್ಪನೆಯ ಡಿಜಿಟಲ್ ಕ್ರಾಂತಿಯ ಮೂಲಕ ಸ್ಥಳೀಯ ಯುವಜನತೆಯ ಸಬಲೀಕರಣ ಮತ್ತು ಉದ್ಯೋಗ ಸೃಷ್ಠಿ ಮಾಡು ವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಎಐ- ಫಿನ್ಟೆಕ್, ಇ ಕಾಮರ್ಸ್ ಮತ್ತು ಡಿಜಿಟಲ್ ಸೇವೆಗಳತ್ತ ಗಮನ ಹರಿಸಬೇಕು. ಐಟಿ ಪಾರ್ಕ್ ಸ್ಥಾಪನೆ, ಟೆಕ್ ಸ್ಟಾರ್ಟ್ ಅಪ್ ಗಳನ್ನು ಆಕರ್ಷಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್, ಮಹಾಸಂಸ್ಥೆಯ ಉಪಾಧ್ಯಕ್ಷೆ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ, ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಕಾರ್ಯದರ್ಶಿ ಡಾ.ವಿಜಯೇಂದ್ರ ರಾವ್, ಜಿಲ್ಲಾ ಸಮನ್ವಯ ಸಮಿತಿ ಚೇಯರ್‌ಮೆನ್ ಅಂಡಾರು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
‘ಕರಾವಳಿಗೆ ವಿಶೇಷ ನೀತಿ ಅಗತ್ಯ’
ಉಡುಪಿ ಜಿಲ್ಲೆಯಲ್ಲಿ 9 ಮೀನು ಸಂಸ್ಕರಣಾ ಘಟಕಗಳಿವೆ. ಕಳೆದ ವರ್ಷ ಶೇ.70 ಶೇರು ಮೀನು ಸಂಸ್ಕರಣಾ ಘಟಕಗಳಲ್ಲಿ ಬಂದಿದೆ. ಆದುದರಿಂದ ಇಲ್ಲಿ ಮೀನು ಸಂಸ್ಕರಣಾ ಘಟಕಕ್ಕೆ ವಿಫುಲ ಅವಕಾಶಗಳಿವೆ. ಇದಕ್ಕೆ ಜಿಲ್ಲೆಯ ಸಮುದ್ರ ತೀರದಲ್ಲಿ ಸಿಆರ್‌ಝೆಡ್ ರಿಯಾಯಿತಿಯೊಂದಿಗೆ 500 ಎಕರೆ ಜಾಗವನ್ನು ಗುರುತಿಸುವ ವಿಶೇಷ ನೀತಿಯ ಅಗತ್ಯ ಇದೆ ಎಂದು ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್ ತಿಳಿಸಿದರು.
ಜಿಲ್ಲೆಯ ನಂದಿಕೂರು, ಬೆಳಪು, ಮಿಯ್ಯಾರು ಮತ್ತು ಕಾರ್ಕಳದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 264 ಎಕರೆ ಭೂಮಿ ಇದೆ. ಕಾರ್ಕಳದ ನಿಟ್ಟೆ, ಹೆಬ್ರಿಯ ಶಿವಪುರದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಗುರುತಿಸಲಾಗಿದೆ. ಯುಪಿಸಿಎಲ್ ಎರಡನೇ ಹಂತದ 530 ಎಕರೆ ಜಾಗವನ್ನು ಕೆಇಎಡಿಬಿ ವಾಪಾಸ್ಸು ಪಡೆದುಕೊಂಡಿದೆ. ಅದೇ ರೀತಿ 350 ಎಕರೆ ಖಾಸಗಿ ಜಾಗವನ್ನು ಗುರುತಿಸಲಾಗಿದೆ ಎಂದರು.
ಸಮುದ್ರ ತೀರ, ಸಿಆರ್‌ಝೆಡ್, ಪಶ್ಚಿಮ ಘಟ್ಟಗಳಿಂದ ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗದ ಸಮಸ್ಯೆ ಪ್ರಮುಖ ವಾಗಿದೆ. ಉಡುಪಿ ಜಿಲ್ಲೆಯಲ್ಲಿ 10000 ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿವೆ. ನಮ್ಮಲ್ಲಿ ಉದ್ಯೋಗ ಕಲ್ಪಿಸಿ ರುವುದರಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ಇದನ್ನು ಪ್ರೋತ್ಸಾಹಿಸುವುದ ರಿಂದ ಹೆಚ್ಚು ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಅವರು ತಿಳಿಸಿದರು.