ನಾಟಕಗಳು ಚಳವಳಿ ರೂಪ ಪಡೆಯಬೇಕಾಗಿದೆ: ಮುನೀರ್ ಕಾಟಿಪಳ್ಳ
ಉಡುಪಿ, ಫೆ.15: ಬರಡಾಗಿರುವ ಕರಾವಳಿಯ ಜನಜೀವನಕ್ಕೆ ರಂಗ ಚಟುವಲಟಿಕೆಗಳ ಅಗತ್ಯ ಹೆಚ್ಚಿದೆ. ಜಾಗತೀಕರಣ ಹಾಗೂ ಮುಕ್ತ ಮಾರುಕಟ್ಟೆ ಇಂದಿನ ಸಂದರ್ಭದಲ್ಲಿ ಮನುಷ್ಯರ ಮೆದುಳನ್ನು ಮಲೀನಗೊಳಿಸುತ್ತಿರುವ ವಿಚಾರಗಳನ್ನು ಶುದ್ಧಗೊಳಿಸಲು ರಂಗಭೂಮಿ ಸೂಕ್ತವಾದ ಮಾಧ್ಯಮವಾಗಿದೆ. ಆದುದರಿಂದ ಹೆಚ್ಚು ಹೆಚ್ಚು ನಾಟಕ ಪ್ರದರ್ಶನಗಳು ಚಳವಳಿ ರೂಪದಲ್ಲಿ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಉಡುಪಿ ಆಶ್ರಯದಲ್ಲಿ ಉಡುಪಿ ಎಂ. ಜಿ.ಎಂ. ಕಾಲೇಜಿನ ಮುದ್ದಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಡಾ.ನಿ.ಮುರಾರಿ ಬಲ್ಲಾಳ್ ಮತ್ತು ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ಮುರಾರಿ -ಕೆದ್ಲಾಯ ರಂಗೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಮಾತನಾಡಿದರು. ಎನ್. ಸಂತೋಷ್ ಬಳ್ಳಾಲ್, ಸಂತೋಷ್ ನಾಯಕ್ ಪಟ್ಲ ಉಪಸ್ಥಿತರಿದ್ದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂಸ್ಥೆಯ ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಕಲ್ಪ ಮೈಸೂರು ತಂಡದಿಂದ ’ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಗೊಂಡಿತು.