×
Ad

‘ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿ ನೀಡಿದವರು ಸಂತ ಸೇವಾಲಾಲರು’

Update: 2025-02-15 21:13 IST

ಉಡುಪಿ: ಸಮಾಜದ ನೂನ್ಯತೆಗಳನ್ನು ಗುರುತಿಸಿ, ಸಮಾಜವನ್ನು ಒಗ್ಗಟ್ಟಾಗಿಸುವ ಮೂಲಕ ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿಯನ್ನು ನೀಡಿದವರು ಸಂತ ಸೇವಾಲಾಲರು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀಸಂತ ಸೇವಾಲಾಲ್ ಬಂಜಾರ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿ ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ ಮಹಾನ್ ಸಂತ ಸೇವಾಲಾಲರು. ಅಧೋಗತಿ ಯಲ್ಲಿರುವ ಸಮಾಜದ ಏಳಿಗೆಗಾಗಿ ಪ್ರತಿಯೊಂದು ಸಮುದಾಯದಲ್ಲೂ ಜನ್ಮ ತಾಳಿದ ಅದೆಷ್ಟೋ ಮಹಾಪುರುಷರ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಸೇವಲಾಲ್ ಕೂಡ ತನ್ನ ಸಮಾಜದ ದಾರ್ಶನಿಕ ರಾಗಿ, ಸಂತರಾಗಿ, ಚಿಂತಕರಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಸಮುದಾಯವನ್ನು ಒಗ್ಗೂಡಿಸಿ ಹಕ್ಕುಗಳ ಹೋರಾಟಕ್ಕಾಗಿ ಪ್ರೇರೇಪಿಸಿದವರು ಸಂತ ಸೇವಾಲಾಲರು. ಅವರ ತ್ಯಾಗ, ಚಿಂತನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಸರಕಾರ ಈ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು, ಸಮುದಾಯದ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಿ ಅವರು ಏಳಿಗೆ ಹೊಂದುವಲ್ಲಿ ಸೇವಾಲಾಲರ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮದಲ್ಲಿ ಕೃಷ್ಣನಗರಿ ಸಂತ ಶ್ರೀ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ಕುಮಾರ್ ಕೆ.ಎಂ ಮಾತನಾಡಿ, ಪ್ರಸ್ತುತ ಸಮುದಾಯದಲ್ಲಿ ಹೆಚ್ಚಿನ ಮಂದಿ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೇವಾಲಾಲರು ಹಾಕಿಕೊಟ್ಟ ಅಡಿಪಾಯದ ಕೆಲವು ಉಪದೇಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.

ಕಾಪು ಕಳತ್ತೂರು ಪಿ.ಕೆ.ಎಸ್ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಎಲ್. ಸಂತ ಸೇವಾಲಾಲ ಹಾಗೂ ಬಂಜಾರ ಸಮುದಾಯದ ಆಚಾರ-ವಿಚಾರಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಲಮಾಣಿ ಹಾಗೂ ಸೇವಾಲಾಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News