×
Ad

ಜೀವನಶೈಲಿ ಬದಲಾವಣೆಯಿಂದ ಆರೋಗ್ಯಪೂರ್ಣ ಬದುಕು ಸಾಧ್ಯ: ಡಾ.ಸುಶೀಲ್ ಜತ್ತನ್ನ

Update: 2025-02-21 21:05 IST

ಉಡುಪಿ, ಫೆ.21: ಆಧುನಿಕ ಯುಗದಲ್ಲಿ ಒತ್ತಡದ ಬದುಕಿನಿಂದ ಹೊರಬರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿ ಕೊಂಡರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದ್ದಾರೆ.

ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ರಾಜ್ಯ ಮತ್ತು ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು, ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಮಿಡ್‌ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಮತ್ತು ಆಯ್ದ ಬಡ ಫಲಾನುಭವಿ ಗಳಿಗೆ ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮನುಷ್ಯ ಆಧುನಿಕ ಜೀವನಶೈಲಿಗೆ ಮಾರುಹೋಗಿ ಪೌಷ್ಠಿಕ ಆಹಾರಗಳನ್ನು ಬಿಟ್ಟು ಇತರ ಆಹಾರ ಸೇವನೆಗೆ ಮುಂದಾಗು ತ್ತಾನೆ. ಅಲ್ಲದೇ ಒತ್ತಡದ ಕೆಲಸ ದಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಜನಸಾಮಾನ್ಯರು ಪೌಷ್ಠಿಕ ಆಹಾರಗಳನ್ನು ಸೇವನೆ ಯೊಂದಿಗೆ ಪ್ರತಿನಿತ್ಯ ವ್ಯಾಯಾಮ, ವಾಕಿಂಗ್‌ನಂಥ ದೈಹಿಕ ಆರೋಗ್ಯ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಹಿಂದೆಲ್ಲಾ ಸಮುದಾಯದ ರೋಗಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಇಂದು ವೈಯಕ್ತಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಶೇ.4ರಷ್ಟು ಜನರಿಗೆ ರಕ್ತದೊತ್ತಡ, ಶೇ.5ರಷ್ಟು ಜನರಿಗೆ ಮಧುಮೇಹ ಕಾಯಿಲೆಗಳಿವೆ. ಕಳೆದ ಎರಡು ಮೂರು ವರ್ಷಗಳಿಂದ ಯುವಜನತೆ ಹೃದಯಾಘಾತದಿಂದ ಮರಣಹೊಂದುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದರು.

ಕ್ಯಾನ್ಸರ್‌ತಜ್ಞೆ ಡಾ. ವಿನುತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನರಲ್ಲಿ ಕ್ಯಾನ್ಸರ್ ರೋಗಗಳು ಕಂಡುಬರು ತ್ತಿವೆ. ಕ್ಯಾನ್ಸರ್‌ಗೆ ಚಿಕಿತ್ಸೆ ಇದೆ. ಮನುಷ್ಯನ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೋಶ ಬೆಳವಣಿಗೆಯಾದಲ್ಲಿ ಆರಂಭಿಕ ಹಂತದಲ್ಲಿಯೇ ಇವುಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಇದು ದೇಹದ ಇತರ ಭಾಗಗಳಿಗೆ ಹರಡಿದಾಗ ಚಿಕಿತ್ಸೆ ನೀಡಲು ಕಷ್ಟಸಾಧ್ಯ ಎಂದರು.

ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾಗುತ್ತಿದ್ದು, ನಮ್ಮ ದೇಹಕ್ಕೆ ಉಪಯುಕ್ತವಾಗುವ ಆಹಾರಗಳನ್ನು ಸೇವಿಸುತ್ತಾ ಉತ್ತಮ ಆರೋಗ್ಯ ಹೊಂದ ಬೇಕು ಎಂದರು.ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ವಿ.ಜಿ ಶೆಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಯ್ದ 25 ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್, ಮಿಷನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ದೀಪಾ ವೈ. ರಾವ್, ಡಾ. ಪವಿತ್ರ ಹಾಗೂ ಡಾ.ಅಕ್ಷತಾ, ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಳ್ಳಾಲ್, ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಧನಂಜಯ ಭಟ್ ಹಾಗೂ ಡಾ. ಗಣೇಶ್ ಕಾಮತ್, ದಂತ ತಜ್ಞರಾದ ಡಾ. ನಾಗೇಶ್ ನಾಯಕ್ ಹಾಗೂ ಡಾ. ಸಾರಿಕಾ ಉಪಸ್ಥಿತರಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರೆ, ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ರಮಾದೇವಿ ವಂದಿಸಿದರು.

300ಕ್ಕೂ ಅಧಿಕ ಮಂದಿ ತಪಾಸಣೆಗೊಳಪಡುವ ಮೂಲಕ ಶಿಬಿರದ ಸದುಪಯೋಗ ಪಡೆದುಕೊಂಡರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News