ಕಟ್ಟಿಂಗೇರಿಯ ಕುದುರೆಮಲೆ ಬೆಟ್ಟದ ಪವಿತ್ರ ಶಿಲುಬೆ ಧ್ವಂಸ: ದುಷ್ಕರ್ಮಿಗಳಿಂದ ಕೃತ್ಯದ ಶಂಕೆ
ಶಿರ್ವ, ಫೆ.22: ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ದುಷ್ಕರ್ಮಿ ಗಳು ಕೆಡವಿ ದ್ವಂಸಗೈದಿರುವ ಘಟನೆ ವರದಿಯಾಗಿದೆ.
ಸ್ಥಳೀಯ ನಿವಾಸಿ ಜೋಸೆಫ್ ವಲೇರಿಯನ್ ಲೋಬೊ ಎಂಬವರ ಖಾಸಗಿ ಜಾಗದಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಪವಿತ್ರ ಶಿಲುಬೆಯು ಕ್ರಿಶ್ಚಿಯನ್ ಸಮುದಾಯದ ಪೂಜಾ ಸ್ಥಳವಾಗಿದೆ. ಧಾರ್ಮಿಕ ಪವಿತ್ರತೆಗೆ ಒಳಗೊಂಡಿರುವ ಈ ಸ್ಥಳದಲ್ಲಿ ಪ್ರತಿ ವರ್ಷದ ಉಪವಾಸ ದಿನಗಳಲ್ಲಿ ಸುತ್ತಮುತ್ತಲಿನ ಸುಮಾರು 30 ಕುಟುಂಬಗಳು ಸೇರಿ ಪ್ರಾರ್ಥನೆ ಸಲ್ಲಿಸುತ್ತ ಬರುತ್ತಿದ್ದಾರೆ.
15 ದಿನಗಳ ಹಿಂದೆ ಇಲ್ಲಿ ಪೂಜಾ ಕಾರ್ಯ ನಡೆದಿದ್ದು, ಅದರ ಬಳಿಕ ಯಾರು ಕೂಡ ಅತ್ತ ಸುಳಿದಿರಲಿಲ್ಲ ಎನ್ನಲಾಗಿದೆ. ಫೆ.19ರಂದು ಸಂಜೆ 7 ಗಂಟೆ ಸುಮಾರಿಗೆ ಈ ಶಿಲುಬೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದು ಬೆಳಕಿಗೆ ಬಂತು. ಎತ್ತರ ಪಿಲ್ಲರ್ ಮೇಲಿರುವ ಶಿಲುಬೆಯನ್ನು ದುಷ್ಕರ್ಮಿಗಳು ಮೇಲೆ ಹತ್ತಿ ಸುತ್ತಿಗೆಯಂತಹ ವಸ್ತುವಿನಿಂದ ಧ್ವಂಸಗೊಳಿಸುವ ಶಂಕೆ ವ್ಯಕ್ತವಾಗಿದೆ.
‘ಈ ಕೃತ್ಯದಿಂದ ನಮಗೆ ಅಘಾತವಾಗಿದ್ದು ನಮ್ಮ ಧರ್ಮಕ್ಕೆ ಅಪಮಾ ವಾಗಿದೆ. ಈ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಪ್ಲಾಲೀವನ್ ಫೆರ್ನಾಂಡೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ: 299, 353 ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್.ಮಾನೆ, ಶಿರ್ವ ಎಸ್ಸೈ ಸಕ್ತಿವೇಲು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
‘ಶಿಲುಬೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾ ಗಿದೆ. ಶಿಲುಬೆಯು ಗುಡ್ಡೆಯ ಮೇಲೆ ಇದ್ದು, ಅಲ್ಲಿ ಯಾವುದೇ ಮನೆಗಳಿಲ್ಲ. ಒಂದು ಕಿ.ಮೀ. ದೂರದಲ್ಲಿ ಮನೆಗಳಿವೆ. ಸುಮಾರು 15-20 ಹಿಂದೆ ಈ ಸ್ಥಳದಲ್ಲಿದ್ದ ಶಿಲುಬೆಯನ್ನು ಸ್ಥಳೀಯರು ನೋಡಿದ್ದರು. ಹಾಗಾಗಿ ಆ ದಿನಗಳ ಮಧ್ಯೆ ಯಾರೋ ಈ ಕೃತ್ಯ ಮಾಡಿರಬಹುದೆಂಬ ಅನುಮಾನ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಿ, ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ, ದುಷ್ಕರ್ಮಿಗಳ ಬಂಧನಕ್ಕೆ ಪ್ರಯತ್ನಿಸ ಲಾಗುವುದು’ -ಡಾ.ಕೆ.ಅರುಣ್, ಎಸ್ಪಿ, ಉಡುಪಿ
ದುಷ್ಕರ್ಮಿಗಳ ಬಂಧನಕ್ಕೆ ಕ್ರೈಸ್ತ ಒಕ್ಕೂಟ ಆಗ್ರಹ
ಕಟ್ಟಿಂಗೇರಿ ಕುದುರೆಮಲೆ ಬೆಟ್ಟದಲ್ಲಿನ ಪವಿತ್ರ ಶಿಲುಬೆಯನ್ನು ಧ್ವಂಸ ಮಾಡಿ ಕ್ರೈಸ್ತರ ಭಾವನೆಗಳಿಗೆ ನೋವು ಉಂಟು ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಕ್ರೈಸ್ತ ಒಕ್ಕೂಟ ಆಗ್ರಹಿಸಿದೆ.
ಕ್ರೈಸ್ತ ಸಮುದಾಯದ ಭಕ್ತಾದಿಗಳು ಬಹಳಷ್ಟು ಪವಿತ್ರತೆಯಿಂದ ಕಾಣುವ ಶಿಲುಬೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು ಕ್ರೈಸ್ತ ಸಮುದಾಯದ ಭಕ್ತರಿಗೆ ನೋವು ತಂದಿದೆ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಕೃತ್ಯ ಮತ್ತು ನಾಡಿನ ಶಾಂತಿಯನ್ನು ಕೆದಡುವ ಕಾರ್ಯವಾಗಿದೆ.
ಉಡುಪಿ ಜಿಲ್ಲೆಯ ಸಾಮರಸ್ಯ ಮತ್ತು ಎಲ್ಲಾ ಧರ್ಮದವರು ಸಹೋದರತೆ ಮತ್ತು ಪ್ರೀತಿಯಿಂದ ಬಾಳುವ ಈ ಸಂದರ್ಭದಲ್ಲಿ ಧರ್ಮ ಧರ್ಮಗಳ ನಡುವೆ ವೈಮಸ್ಸು ಸೃಷ್ಟಿಸಲು ಇದನ್ನು ಮಾಡಲಾಗಿದೆ. ಈ ಕೃತ್ಯ ಯಾರೇ ಮಾಡಿದರೂ ತಕ್ಷಣ ಅವರನ್ನು ಕಾನೂನು ರೀತಿಯಲ್ಲಿ ಕ್ರಮ ತೆಗೆದು ಕೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಆರೋಪಿಸಿದ್ದಾರೆ.