ರೈತರಿಗೆ ನ್ಯಾಯ ಸಿಗಲಿ; ಭ್ರಷ್ಟರಿಗೆ ಶಿಕ್ಷೆಯಾಗಲಿ: ಎಚ್.ಜಯಶೀಲ ಶೆಟ್ಟಿ
ಬ್ರಹ್ಮಾವರ: ಕರ್ನಾಟಕ ಕರಾವಳಿಯಲ್ಲಿರುವ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದ 14 ಕೋಟಿ ರೂ.ಗಳ ಭ್ರಷ್ಟಾಚಾರದಲ್ಲಿ ಶಾಮೀಲಾದವರಿಗೆ ಶಿಕ್ಷೆಯಾಗಲಿ ಹಾಗೂ ಇದರ ವಿರುದ್ಧ ಹೋರಾಟಕ್ಕಿಳಿದಿರುವ ರೈತರಿಗೆ ನ್ಯಾಯಸಿಗಲಿ ಎಂದು ಬ್ರಹ್ಮಾವರ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ತೋಟಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ, ಹಿರಿಯ ಪ್ರಗತಿಪರ ಕೃಷಿಕ ಎಚ್.ಜಯಶೀಲ ಶೆಟ್ಟಿ ಮೊಳಹಳ್ಳಿ ಹೇಳಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 2021-22ರ ನಡುವೆ ಗುಜರಿ ಮಾರಾಟದ ಹೆಸರಿನಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರದ ವಿರುದ್ಧ ಕ್ರಮಕ್ಕೆ ಪ್ರತಿಹಂತದಲ್ಲೂ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ವಿವಿಧ ರೈತ ಸಂಘಟನೆಗಳು, ಸಹಕಾರಿ ಕ್ಷೇತ್ರದ ಪ್ರಮುಖರು, ಸಾರ್ವಜನಿಕರು ಕಾರ್ಖಾನೆಯ ಎದುರು ಇಂದಿನಿಂದ ಪ್ರಾರಂಭಿಸಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ವೇದಿಕೆಯ ಮೇಲಿರಿಸಿದ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಹಕಾರಿಗಳ, ರೈತರ ಈ ಕಾರ್ಖಾನೆಯಲ್ಲಿ ಸುಧೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿ ಏನೊಂದು ಸಾಧನೆ ಮಾಡದೇ ನಿವೃತ್ತನಾದ ನತದೃಷ್ಟ ನಾನು. ಮುಚ್ಚಿದ ಕಾರ್ಖಾನೆಯ ಪುನಶ್ಚೇತನದ ಕನಸು ಕಂಡು ಕೊನೆಯವರೆಗೂ ಪ್ರಯತ್ನಿಸಿದರೂ ಸಫಲನಾಗದ ಬೇಸರ ನನಗೀಗಲೂ ಇದೆ. ಇದೀಗ ರೈತರ ಹಿತಾಸಕ್ತಿ ಯನ್ನು ಕಡೆಗಣಿಸಿ ಕಾರ್ಖಾನೆಯ ಹಳೆಯಸೊತ್ತು, ಗುಜರಿ ಮಾರಾಟದ ನೆಪದಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆಸಿರುವ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಹೋರಾಟ ಕ್ಕಿಳಿದಿರುವ ರೈತರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಮಾಜಿ ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ ಅವರ ನೇತೃತ್ವದ ಹೋರಾಟ ಯಶಸ್ವಿಯಾಗುವುದೆಂಬ ಭರವಸೆ ನನಗಿದೆ ಎಂದರು.
ರೈತರ ಹೋರಾಟಕ್ಕೆ ಬೆಂಬಲ ನೀಡಿ ಇಂದಿನ ಧರಣಿಯಲ್ಲಿ ಜೊತೆಗೂಡಿದ ಹಿರಿಯ ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭದಾಯಕವಾಗಿ ನಡೆಯುತ್ತಿಲ್ಲ. ಅದನ್ನು ನಡೆಸುವವರಿಗೆ ಮಾತ್ರ ಲಾಭವಾಗುತ್ತಿದೆ ಎಂದರಲ್ಲದೇ ಕರಾವಳಿಗೆ ಸಕ್ಕರೆ ಕಾರ್ಖಾನೆ ಸೂಕ್ತವಲ್ಲ. ಆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ವ್ಯವಹಾರದಲ್ಲಿ ಮಾತ್ರ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೇ ಅವ್ಯವಹಾರ ನಡೆಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡಬರುತ್ತದೆ. ಇದರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ವಿಷಯದಲ್ಲಿ ತಾನು ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯುವನ್ನು ಪ್ರತಿನಿಧಿಸಿದ ಬಾಲಕೃಷ್ಣ ಶೆಟ್ಟಿ ಅವರು ಗುಜರಿ ಮಾರಾಟದಲ್ಲಿ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬೃಹತ್ ಭ್ರಷ್ಟಾಚಾರ ನಡೆಸಿರುವವರ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಹಿಂದೆ ಬಿಜೆಪಿ ಸರಕಾರದ ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜನ್ನು ಮುಚ್ಚಿದಾಗ ನಾವು ಜಿಲ್ಲಾ ರೈತ ಸಂಘದೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದು, ಅದು ಪುನರಾರಂಭ ಗೊಳ್ಳುವಂತಾಯಿತು. ಈ ಹೋರಾಟ ದಲ್ಲೂ ಯಶಸ್ಸು ಸಿಗುವ ವಿಶ್ವಾಸ ನಮಗಿದೆ ಎಂದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಕೃಷಿಕರು, ಸಹಕಾರಿ ಮುಖಂಡರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಪ್ರಮುಖರಾದ ಬಿ.ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ಹರಿಪ್ರಸಾದ್ ರೈ, ಯಡ್ತಾಡಿ ಸತೀಶ್ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಹರೀಶ್ ಶೆಟ್ಟಿ ಪಾಂಗಾಳ, ಚೋರಾಡಿ ಅಶೋಕಕುಮಾರ್ ಶೆಟ್ಟಿ, ಭೋಜ ಕುಲಾಲ್, ಸದಾನಂದ ಶೆಟ್ಟಿ ಧರಣಿಯಲ್ಲಿ ಭಾಗವಹಿಸಿದ ಪ್ರಮುಖರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಎಲ್ಲರನ್ನೂ ಸ್ವಾಗತಿಸಿದರೆ, ಶ್ರೀರಾಜ್ ಉಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸತ್ಯಾಗ್ರಹವಲ್ಲ ‘ನ್ಯಾಯಾಗ್ರಹ’
ಉಡುಪಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ, ಹಿರಿಯ ಪತ್ರಕರ್ತ, ಅಂಕಣಕಾರ ರಾಜಾರಾಮ್ ತಲ್ಲೂರು ಮಾತ ನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರು ಕಳೆದ 30 ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಮಾಡುವು ದನ್ನೇ ಬಿಟ್ಟಿದ್ದಾರೆ. ಇಲ್ಲಿ ಮೊದಲ ಬಾರಿ ರೈತರು ಅನ್ಯಾಯವನ್ನು ಪ್ರಶ್ನಿಸುವ ಹಾಗೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ದೃಢ ಸಂಕಲ್ಪ ಮಾಡಿರುವುದು ಖಂಡಿತ ಒಳ್ಳೆಯ ಬೆಳವಣಿಗೆ ಎಂದರು.
ಇಲ್ಲಿ ರೈತ ಸಂಘದ ನೇತೃತ್ವದಲ್ಲಿ ನಡೆದಿರುವುದನ್ನು ಸತ್ಯಾಗ್ರಹ ಎಂದು ನಾನು ಕರೆಯುವುದಿಲ್ಲ. ಇದನ್ನು ‘ನ್ಯಾಯಾಗ್ರಹ’ ಎನ್ನುತ್ತೇನೆ. ‘ನ್ಯಾಯದ ವಿಳಂಬ ಎಂಬುದು ನ್ಯಾಯದ ನಿರಾಕರಣೆಗೆ ಸಮ’ ಎಂಬ ಮಾತಿದೆ. ಇಲ್ಲೂ ಸಹ ನ್ಯಾಯಕೇಳಿದ ರೈತರಿಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸರಕಾರಕ್ಕೆ ಎಲ್ಲಾ ಗೊತ್ತಿದ್ದು ವಿಳಂಬ ಮಾಡುತ್ತಿದೆ. ಹೀಗಾಗಿ ಇದನ್ನು ನ್ಯಾಯಾಗ್ರಹ ಎಂದು ಕರೆಯಬಹುದು ಎಂದು ರಾಜಾರಾಮ್ ತಲ್ಲೂರು ನುಡಿದರು.