ಮಳೆಯಿಂದ ಕುಸಿದ ನಾಲ್ಕೂರು ರಸ್ತೆ ರಿಪೇರಿ: ವಾಹನಗಳಿಗೆ ಬದಲಿ ಮಾರ್ಗ
ಸಾಂದರ್ಭಿಕ ಚಿತ್ರ
ಉಡುಪಿ, ಫೆ.25: ಬ್ರಹ್ಮಾವರ ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಆರೂರು- ಮುಂಡ್ಕಿನಜೆಡ್ಡು- ಕೊಕ್ಕರ್ಣೆ- ನಾಲ್ಕೂರು ರಸ್ತೆಯ ಒಂದು ಭಾಗ ಮಳೆಯಿಂದ ಕುಸಿದಿದ್ದು, ಈ ಭಾಗದಲ್ಲಿ ರಸ್ತೆ ಬದಿ ತಡೆಗೋಡೆ ಹಾಗೂ ಸ್ಲ್ಯಾಬ್ ಮೋರಿ ನಿರ್ಮಾಣ ಕಾಮಗಾರಿ ನಡೆಯಬೇಕಾಗಿದೆ.
ಇದಕ್ಕಾಗಿ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗವನ್ನು ಕಲ್ಪಿಸಲಾಗಿದ್ದು, ಇದೇ ಮಾರ್ಚ್ 2ರಿಂದ ಎಪ್ರಿಲ್ 30ರವರೆಗೆ ಎಲ್ಲಾ ವಾಹನಗಳು ಸೂಚಿತ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ತಿಳಿಸಿದಂತೆ ಮಾ.2ರಿಂದ ಎ.30ರವರೆಗೆ ಕೊಕ್ಕರ್ಣೆ- ನಾಲ್ಕೂರು ರಸ್ತೆಯ ಮಾರಾಳಿ ಎಂಬಲ್ಲಿ ಸ್ಲ್ಯಾಬ್ ಮೋರಿ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯಾಗಿ ರುವ ಆರೂರು- ಮುಂಡ್ಕಿನಜೆಡ್ಡು- ಕೊಕ್ಕರ್ಣೆ- ನಾಲ್ಕೂರು (ಕೊಕ್ಕರ್ಣೆ- ನಾಲ್ಕೂರು ರಸ್ತೆ) ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಕೊಕ್ಕರ್ಣೆ- ಮಾರಾಳಿ - ಹೊರ್ಲಾಳಿ- ನಾಲ್ಕೂರು ಜಿಲ್ಲಾ ಪಂಚಾಯತ್ ರಸ್ತೆಯ ಬದಲೀ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.