ಬ್ಲಾಕ್‌ಮೇಲ್ ನನ್ನ ರಕ್ತದಲ್ಲೇ ಇಲ್ಲ: ಡಿ.ಕೆ.ಶಿವಕುಮಾರ್
ಉಡುಪಿ, ಮಾ.2: ರಾಜ್ಯದ ಮುಖ್ಯಮಂತ್ರಿ ಅಧಿಕಾರವನ್ನು ಹಂಚಿಕೊಳ್ಳುವ ವಿಚಾರದಲ್ಲಿ ನಾನು ಯಾರಿಗೂ ಯಾವುದೇ ಕಂಡೀಷನ್ ಹಾಕಿಲ್ಲ. ಹಾಗೆ ಕಂಡಿಷನ್ ಹಾಕುವ ಅಗತ್ಯತೆಯೂ ನನಗೆ ಇಲ್ಲ. ನಾನೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯ ಕರ್ತ, ಪಕ್ಷ ಏನು ಹೇಳುತ್ತದೆ ಅಷ್ಟು ಕೆಲಸ ಮಾಡುವವನು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಹೊಸದಿಲ್ಲಿಯಲ್ಲಿ ಪಕ್ಷದ ಹೈಕಮಾಂಡನ್‌ನ್ನು ಭೇಟಿ ಯಾದ ಬಗ್ಗೆ ಪತ್ರಕರ್ತರು ಅವರನ್ನು ಪ್ರಶ್ನಿಸಿದಾಗ ಅವರು ಈ ಸ್ಪಷ್ಟನೆ ನೀಡಿದರು.
ಕಂಡೀಷನ್, ಬ್ಲಾಕ್‌ಮೇಲ್ ಎಲ್ಲಾ ನನ್ನ ರಕ್ತದಲ್ಲೇ ಇಲ್ಲ. ‘ಐ ಆ್ಯಮ್ ಎ ಲಾಯಲ್ ಕಾಂಗ್ರೆಸ್ ವರ್ಕರ್. ನನ್ನ ಡೆಡಿಕೇಶನ್ ಪಕ್ಷಕ್ಕೆ... ಗಾಂಧಿ ಫ್ಯಾಮಿಲಿ ಗೆ...ನನ್ನ ಬಗ್ಗೆ ಯಾರೇ, ಯಾವುದೇ ಪಾರ್ಟಿಯವರು ಯೋಚನೆ ಮಾಡುತ್ತಿದ್ದರೆ ಅದು ಅವರ ಭ್ರಮೆ. ಪಕ್ಷ ಹೇಳಿದಷ್ಟು ಕೆಲಸ ಮಾಡುವವನು. ಅಷ್ಟು ಬಿಟ್ಟರೆ ನಾನು ಬೇರೆ ಏನು ಕೆಲಸ ಮಾಡಲ್ಲ.’ ಎಂದು ಡಿಕೆಶಿ ಗುಡುಗಿದರು.
ನಿಮ್ಮ ನಡೆಯಿಂದ ಬಿಜೆಪಿಯವರಿಗೆ ಗೊಂದಲ ಆಗಿರಬೇಕಲ್ಲ ಎಂದು ಕೇಳಿದಾಗ, ಅವರು ಕನ್ಫ್ಯೂಷ್ ಆಗಲೇಬೇಕಲ್ಲ. ಅವರು ಆಗ್ಲಿ ಎಲ್ಲರೂ ಆಗ್ಲಿ.. ನೀವು ಸಹ ಕನ್ಫ್ಯೂಸ್ ಆಗಿ ಎಂದ ಡಿಸಿಎಂ, ನನ್ನ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಸಮಾಧಾನ ಇರೋದಿಲ್ಲ. ನೀವು ಟಿವಿಯವರು, ಪೇಪರ್ ನವರು ನಮ್ಮ ಸುದ್ದಿ ಹಾಕದಿದ್ದರೆ ನಿಮ್ಮ ಟಿಆರ್‌ಪಿ ಏರೋದಿಲ್ಲ ಎಂದು ನಕ್ಕರು.
ಹಾಗಿದ್ದರೆ, ಎರಡು ವರ್ಷ, ಎರಡೂವರೆ ವರ್ಷ ಎಲ್ಲಾ ಸುಳ್ಳಾ ಎಂದು ಮರು ಪ್ರಶ್ನಿಸಿದಾಗ, ನೋಡಿ 2028ರಲ್ಲಿ ಕಾಂಗ್ರೆಸ್ ಪಾರ್ಟಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ. ಅಷ್ಟು ಮಾತ್ರ ಹೇಳಬಲ್ಲೆ ಎಂದು ಉತ್ತರಿಸಿದರು.