ಕೆಲವೇ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಬಿ.ವೈ.ವಿಜಯೇಂದ್ರ
ಉಡುಪಿ, ಮಾ.2: ಪಕ್ಷದೊಳಗಿನ ಎಲ್ಲಾ ವಿವಾದಗಳಿಗೂ ಇತಿಶ್ರೀ ಹಾಕುವ ಕಾಲ ಕೂಡಿಬಂದಿದೆ. ಸದ್ಯದಲ್ಲೇ ರಾಜ್ಯದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಗೊತ್ತಾಗುತ್ತದೆ. 12 ರಾಜ್ಯಗಳಿಗೆ ಮಾತ್ರ ಅಧ್ಯಕ್ಷರ ನೇಮಕಾತಿ ಯಾಗಿದೆ. ನಮ್ಮ ರಾಜ್ಯ ಒಳಗೊಂಡಂತೆ ಇತರ ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಸಮಸ್ಯೆ ವಿಶೇಷವಾಗಿದೆ. ಅಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಎಲ್ಲ ಸಮಸ್ಯೆ ಬಗೆಹರಿಯಲಿದೆ. ಏನೇ ಸಮಸ್ಯೆಗಳು ಬಂದರೂ ನಾನು ನಿರಾಳವಾಗಿ ರುತ್ತೇನೆ. ಸಮಸ್ಯೆಗೆ ಉತ್ತರ ಏನು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ಕೇಂದ್ರದ ವರಿಷ್ಠರಿಗೂ ಗೊತ್ತಿದೆ. ಎಲ್ಲ ಸಮಸ್ಯೆಗಳಿಗೂ ಕೇಂದ್ರದ ವರಿಷ್ಠರು ಒಳ್ಳೆಯ ಉತ್ತರ ನೀಡುತ್ತಾರೆ ಎಂದರು.
ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಲಿದ್ದಾರೆ. ಯಡಿಯೂರಪ್ಪನವರ ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳಿಗೂ ನಮಗೇನು ಸಿಗುತ್ತೆ ಎಂಬ ಕಾತರ ಇತ್ತು. ತುಳುನಾಡಿಗೆ ಯಡಿಯೂರಪ್ಪ ವಿಶೇಷ ಅನುದಾನ ನೀಡುತ್ತಿದ್ದರು. ಈ ಸರಕಾರದಲ್ಲಿ ಆ ಪರಿಸ್ಥಿತಿ ಇಲ್ಲ ಎಂದು ಅವರು ದೂರಿದರು.
ಸಿದ್ದರಾಮಯ್ಯ ಗ್ಯಾರೆಂಟಿಗಳಿಂದ ತಮ್ಮ ಕೈ ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನೀರಾವರಿ ಲೋಕೋಪಯೋಗಿ ಇಲಾಖೆಯಲ್ಲಿ ಹಣವೇ ಇಲ್ಲ. ವಿದ್ಯುತ್ ಬಿಲ್‌ನ್ನು ಕೂಡ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಬಂದು ನಿಂತಿದೆ. ವಿವಿಧ ಇಲಾಖೆಗಳು 6,000 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದುವ ಅವರು ಆರೋಪಿಸಿದರು.
ಡಿಕೆ ಶಿವಕುಮಾರ್ ಇಶಾ ಫೌಂಡೇಶನ್‌ನಲ್ಲಿ ಗೃಹ ಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಇದಕ್ಕೆ ವಿಶೇಷವಾದ ಅರ್ಥ ಕಲ್ಪಿಸುವುದು ಬೇಕಾಗಿಲ್ಲ. ಆಡಳಿತ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಬರುವ ದಿನಗಳಲ್ಲಿ ಎಲ್ಲವನ್ನು ಕಾದು ನೋಡಬೇಕು ಎಂದು ಅವರು ತಿಳಿಸಿದರು.