×
Ad

ಬೂದಿ ಬುಧವಾರ ಆಚರಣೆಯೊಂದಿಗೆ ಕ್ರೈಸ್ತರ ತಪಸ್ಸು ಕಾಲ ಆರಂಭ

Update: 2025-03-05 19:00 IST

ಉಡುಪಿ, ಮಾ.5: ಯೇಸುಕ್ರಿಸ್ತರ ಕಷ್ಟಗಳ ಕಾಲವನ್ನು ಸ್ಮರಿಸುವ 40 ದಿನ ತಪಸ್ಸು ಕಾಲ ಬುಧವಾರದಿಂದ ಆರಂಭ ಗೊಂಡಿದ್ದು, ತಪಸ್ಸು ಕಾಲದ ಆರಂಭದ ದಿನವನ್ನು ವಿಭೂತಿ(ಬೂದಿ) ಬುಧವಾರ(ಆ್ಯಶ್ ವೆಡ್ನೆಸ್ ಡೇ)ವಾಗಿ ಆಚರಿಸಿದರು.

ಈಸ್ಟರ್ ಹಬ್ಬಕ್ಕೂ ಮೊದಲು ಆರು ವಾರಗಳ ಕಾಲ ಆಚರಿಸುವ ಪಶ್ಚಾತ್ತಾಪದ ಕಾಲದ ಮೊದಲ ದಿನವೇ ವಿಭೂತಿ ಬುಧವಾರ. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಬುಧವಾರ ಬೆಳಿಗ್ಗೆ ಪ್ರಾರ್ಥನಾವಿಧಿನಗಳು ಜರಗಿದ್ದು, ಧರ್ಮ ಗುರುಗಳು ಭಕ್ತಾದಿ ಗಳ ಹಣೆಗಳಿಗೆ ಆಶೀರ್ವದಿಸಿದ ಬೂದಿ (ವಿಭೂತಿ)ಯನ್ನು ಹಚ್ಚಿ ಧೂಳಿನಿಂದ ಬಂದ ಮನುಷ್ಯ ಮರಳಿ ಧೂಳಿಗೆ ಎಂಬ ವಾಕ್ಯವನ್ನು ಪುನರುಚ್ಚರಿಸುವ ಮೂಲಕ ಕ್ರಿಸ್ತರ ಕಷ್ಟ ಕಾಲವನ್ನು ಸ್ಮರಿಸುತ್ತಾರೆ.

ಧರ್ಮಗುರುಗಳು ಪಾಪದ ಜೀವನ ತೊರೆದು ಕ್ರಿಸ್ತರ ಹಾದಿ ತುಳಿಯಲು, ಅವರ ಅನುಯಾಯಿಗಳಾಗಲು ಕರೆ ನೀಡುತ್ತಾರೆ. ಇಲ್ಲಿಂದ ಮುಂದಿನ ಸುಮಾರು 40 ದಿನಗಳ ಕಾಲ ಯೇಸು ಕ್ರಿಸ್ತರ ಕಷ್ಟ ಕಾಲವನ್ನು ಕ್ರೈಸ್ತರು ಸ್ಮರಿಸುತ್ತಾರೆ.

ಮಾನವನ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪದ ಗುರುತಾಗಿ ಶಿರಗಳಿಗೆ ವಿಭೂತಿ ಹಚ್ಚಿ ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ಮನ ಪರಿವರ್ತನೆಯೊಂದಿಗೆ ಪ್ರಭು ಯೇಸುವಿನ ಪುನರುತ್ಥಾನದಲ್ಲಿ ಪಾಲ್ಗೊಳ್ಳುವುದೇ ತಪಸ್ಸು ಕಾಲದ ಉದ್ದೇಶ. ತಪಸ್ಸು ಕಾಲವನ್ನು ಶ್ರದ್ಧೆ ಯಿಂದ ಆಚರಿಸಿ ಪಾಪ ಪರಿಹಾರ ದೊಂದಿಗೆ ನವ ವ್ಯಕ್ತಿಗಳಾಗಿ ಪ್ರಭು ಕ್ರಿಸ್ತರ ಕಷ್ಟ, ಯಾತನೆ, ಮರಣ ಹಾಗೂ ಪುನರುತ್ಥಾನವನ್ನು ಧ್ಯಾನಿಸುವುದೇ ತಪಸ್ಸು ಕಾಲದ ಪ್ರಮುಖ ಗುರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News