ರಂಗ ಶಿಕ್ಷಣ ಯೋಜನೆ ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ: ತಲ್ಲೂರು
ಬೈಂದೂರು, ಮಾ.9: ರಂಗಭೂಮಿ ಉಡುಪಿ ವತಿಯಿಂದ 12 ಶಾಲಾ ಕಾಲೇಜುಗಳಲ್ಲಿ ಆರಂಭಿಸಲಾದ ರಂಗ ಶಿಕ್ಷಣ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆ ದಿದೆ. ಈ ಮೂಲಕ ಮಕ್ಕಳಿಗೆ ರಂಗತರಬೇತಿಯನ್ನು ನೀಡಿ ಅವರಲ್ಲಿ ರಂಗಪ್ರಜ್ಞೆಯ ಜೊತೆಗೆ ನೈತಿಕ ತೆಯ ಪಾಠವನ್ನು ಕಲಿಸುವ ಉದ್ದೇಶವಿದೆ. ನೈತಿಕತೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡುವುದು ಅತೀ ಅಗತ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಬೈಂದೂರಿನ ಶ್ರೀಸೇನೇಶ್ವರ ದೇವಳದ ಮುಂಭಾಗದ ಶ್ರೀಶಾರದಾ ವೇದಿಕೆಯಲ್ಲಿ ನಡೆಯುತ್ತಿರುವ ಲಾವಣ್ಯ ಬೈಂದೂರು ಇದರ 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ. ಲಕ್ಷ್ಮೀ ನಾರಾ ಯಣ ಬೈಂದೂರು ಸ್ಮರಣಾರ್ಥ ಹಮ್ಮಿಕೊಂಡ, ’ರಂಗಪಟಚಮಿ -2025’ ರಂಗೋತ್ಸವದ 4ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾಫ್ಟ್‌ವೇರ್ ಎಂಜಿನಿಯರ್ ಪ್ರವೀಣ್ ಶೆಟ್ಟಿ ಶುಭಾಶಂಸನೆಗೈದರು. ಕಾಲ್ತೋಡು ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಉಡುಪಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಆಲೂರು ತಾರಿಬೇರು ಶ್ರೀಸೋಮನಾ ಥೇಶ್ವರ ದೇವಳದ ಅಧ್ಯಕ್ಷ ರಾಜರಾಮ್ ಭಟ್ ಉಪ್ಪುಂದ, ಬೈಂದೂರು ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮದ್ದೋಡಿ, ಉದ್ಯಮಿ ಸತೀಶ್ ಶೆಟ್ಟಿ, ಜೆಸಿಐ ಉಪ್ಪುಂದ ಅಧ್ಯಕ್ಷ ಭರತ ದೇವಾಡಿಗ, ಬೈಂದೂರು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಂಗ ಯಡ್ತರೆ, ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್, ಕಾರ್ಯದರ್ಶಿ ವಿಶ್ವನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಮದ್ದಲೆ ವಾದಕ ನಾರಾಯಣ ದೇವಾಡಿಗ ಹಾಗೂ ಕೊಂಕಣಿ ರಂಗ ಕಲಾವಿದ ಜೋಸೆಫ್ ಫೆರ್ನಾಂಡಿಸ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಧುರೀಣ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಬಳಿಕ ನಟನಾ ಮೈಸೂರು ತಂಡದಿಂದ ’ಪ್ರಮೀಳಾರ್ಜುನೀಯಂ’ ನಾಟಕ ಪ್ರದರ್ಶನಗೊಂಡಿತು.