ಕೊಲ್ಲೂರು ದೇವಳದ ಅತಿಕ್ರಮಣ ಜಾಗ ತೆರವಿಗೆ ಕ್ರಮ: ಬಾಬು ಶೆಟ್ಟಿ
ಕುಂದಾಪುರ, ಮಾ.9: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಪರಿಸರದ ಸುತ್ತಮುತ್ತ ಅತಿಕ್ರಮಣ ಹಾಗೂ ಒತ್ತುವರಿಯಾಗಿರುವ ದೇಗುಲದ ಜಾಗದ ತೆರವಿಗೆ ಹಾಗೂ ರಾಜ್ಯದ ಇತರ ಭಾಗದಲ್ಲಿರುವ ದೇವಳದ ಜಾಗಗಳನ್ನು ಗುರುತಿಸಿ ದೇವಸ್ಥಾನದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ.
ದೇಗುಲದ ವಾರ್ಷಿಕ ಜಾತ್ರೆ ಹಾಗೂ ಶ್ರೀಮನ್ಮಹಾರಥೋತ್ಸವದ ಬಗ್ಗೆ ರವಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಜಾಗವನ್ನು ಗುರುತಿಸಿ, ತೆರವು ಮಾಡುವ ಕುರಿತು ಜಿಲ್ಲಾಡಳಿತ ಹಾಗೂ ಮುಜುರಾಯಿ ಇಲಾಖೆಯ ಮಾರ್ಗದರ್ಶನ ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು ಎಂದರು.
ಪರಭಾರೆಯಾಗಿರುವ ಜಾಗಗಳನ್ನು ಗುರುತಿಸಿ ಸರ್ವೇ ಹಾಗೂ ಇತರ ಕಾನೂನಾತ್ಮಕ ಕ್ರಮಗಳ ಅನುಸರಣೆಗಾಗಿ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ. 72 ಸೆಂಟ್ಸ್ ಒತ್ತುವರಿ ಆಗಿರುವ ಕುರಿತು ಪ್ರಾಥಮಿಕ ಮಾಹಿತಿ ಇದ್ದು, ವೈಜ್ಞಾನಿಕ ಸರ್ವೇಯಿಂದ ನಿಖರ ಮಾಹಿತಿ ದೊರೆಯುತ್ತದೆ. ದೇವಸ್ಥಾನಕ್ಕೆ ಬರಬೇಕಾ ಗಿರುವ ಬಾಡಿಗೆ ಹಾಗೂ ಇತರ ಬಾಕಿ ಹಣಗಳ ವಸೂಲಿಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಲುಷಿತಗೊಳ್ಳುತ್ತಿರುವ ಸೌಪರ್ಣಿಕ ನದಿಯ ನೀರನ್ನು ಶುದ್ಧವಾಗಿರಿಸಲು ವಸತಿ ಗೃಹಗಳು ಹಾಗೂ ಇತರ ಕಟ್ಟಡಗಳಿಂದ ತ್ಯಾಜ್ಯಗಳನ್ನು ನದಿಗೆ ಬಿಡುತ್ತಿರುವುದನ್ನು ಕಡ್ಡಾಯವಾಗಿ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ಒಳಚರಂಡಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಇರುವ ಅಡೆ- ತಡೆಗಳ ನಿವಾರಣೆಗಾಗಿ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಲಲಿತಾಂಬಿಕಾ ವಸತಿ ಗೃಹದ ನವೀಕರಣ ಹಾಗೂ ದುರಸ್ತಿಗಾಗಿ ಅಂದಾಜು 2 ಕೋಟಿ ರೂ. ಯೋಜನೆ ತಯಾರಿಸಲಾಗಿದೆ. ಅಂದಾಜು 19 ಕೋಟಿ ರೂ. ವೆಚ್ಚದಲ್ಲಿ 65 ಕೊಠಡಿಗಳ ಬಹುಮಹಡಿ ವಸತಿಗೃಹ ನಿರ್ಮಾಣಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು 100 ಕೊಠಡಿಗಳಿಗೆ ಹೆಚ್ಚಿಸಬೇಕು ಎನ್ನುವ ಯೋಚನೆ ಇದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂಗ್ಲೀಷ್ ಭಾಷಾ ಅಧ್ಯಯನಕ್ಕೂ ಅವಕಾಶ ನೀಡಲಾಗುವುದು. ಜ್ಯೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಆರಂಭಕ್ಕಾಗಿ ಅನುಮತಿ ಕೇಳಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ದೇವಸ್ಥಾನದ ಪಾರ್ಕಿಂಗ್‌ನಲ್ಲಿ ಟೆಂಡರ್‌ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎನ್ನುವ ಕುರಿತು ಸಾರ್ವಜನಿಕ ದೂರುಗಳಿದ್ದು, ಷರತ್ತು ಉಲ್ಲಂಘನೆಯ ಕುರಿತು ಈಗಾಗಲೇ ಗುತ್ತಿಗೆದಾರರಿಗೆ ನೋಟಿಸು ನೀಡಲಾಗಿದ್ದು, ಸಮಂಜಸ ಉತ್ತರ ಬಾರದೆ ಇದ್ದಲ್ಲಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಘರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ಸಿಬ್ಬಂದಿ ಸಂತೋಷ್ ಕೊಠಾರಿ ಉಪಸ್ಥಿತರಿದ್ದರು.