ಯಕ್ಷಗಾನ ಕಲೆ ಪ್ರದರ್ಶನ, ಅಭ್ಯಾಸಕ್ಕೆ ಪ್ರಾದೇಶಿಕ ಚೌಕಟ್ಟಿನ ಭಯವಿಲ್ಲ: ತಲ್ಲೂರು
ಉಡುಪಿ: ಯಕ್ಷಗಾನ ಕಲೆ ಕಲಿಯಲು, ಅಭ್ಯಾಸಿಸಲು ಯಾವುದೇ ಪ್ರಾದೇಶಿಕ ಸರಹದ್ದಿನ ಭಯವಿಲ್ಲ. ಈ ನಿಟ್ಟಿನಲ್ಲಿ ಗೋವಾದ ಕನ್ನಡ ಸಮಾಜ ಯಕ್ಷಗಾನ ಪ್ರೇಮವನ್ನು ಮೆರೆದಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಗೋವಾ ಪಣಜಿಯ ಕನ್ನಡ ಸಮಾಜದ ಆಶ್ರಯದಲ್ಲಿ ಮೆನೆಜಸ್ ಭ್ರಗಾಂಜ ಸಭಾಂಗಣದಲ್ಲಿರವಿವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಜಂಟಿ ಸಹಕಾರದಲ್ಲಿ ಹಮ್ಮಿಕೊಳ್ಳ ಲಾದ ’ಯಕ್ಷ ಶರಧಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಡಿದರು.
ಇಂದು ಯಕ್ಷಗಾನ ಸೀಮೋಲ್ಲಂಘನೆ ನಡೆಸಿದೆ. ಬೆಂಗಳೂರು, ಮುಂಬೈ, ದೆಹಲಿ ಅಲ್ಲದೆ ಅಮೇರಿಕಾ ದಲ್ಲಿಯೂ ತನ್ನ ಕಂಪನ್ನು ಬೀರುತ್ತಿದೆ. ಅಪಾರ ಯಕ್ಷಗಾನ ಪ್ರೇಮಿಗಳನ್ನು ಹುಟ್ಟುಹಾಕಿದೆ. ಅಕಾಡೆಮಿ ಇಂತಹ ಯಕ್ಷಗಾನ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡಲಿದೆ. ಯಕ್ಷಗಾನ ಕಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ದೇಶ ವಿದೇಶದಿಂದಲೂ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.
ಸರಕಾರ ನೀಡುವ ಅನುದಾನ ಯಕ್ಷಗಾನ ಕಲೆ, ಕಲಾವಿದರಿಗೆ ಸಲ್ಲಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಅಲ್ಲದೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯನ್ನು ಅಕಾಡೆಮಿ ಹೊಂದಿದೆ. ಈ ನಿಟ್ಟಿನಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಕಲಿಸುವ ಸಂಘಸಟಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಗೋವಾ ಬಂಟ್ಸ್ ಸಂಘ ಮತ್ತು ಮಡಗಾಂವ್ ವಿಮಾ ಸರ್ವೇಯರ್ ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಶೆಟ್ಟಿ ಉದ್ಘಾಟಿಸಿದರು. ಭಾಗವತ ಎ.ಜಿ.ಶಿವಾನಂದ ಭಟ್, ಗೋವಾ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ.ಗಣೇಶ್ ಸೋಮಯಾಜಿ ಮಾತನಾಡಿದರು.
ಅರ್ಥಧಾರಿ ಅಜಿತ್ ಕಾರಂತ ಬೆಂಗಳೂರು ಇವರು ಯಕ್ಷಸಾಹಿತ್ಯ ಸಾಂಗತ್ಯ ಎಂಬ ವಿಷಯದ ಬಗ್ಗೆ ಮಾತನಾಡಿದರು. ಹೊನ್ನವಳ್ಳಿಯ ಶ್ರೀವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ ಶರಸೇತು ಬಂಧನ ತಾಳಮದ್ದಲೆ ಹಾಗೂ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಹಳುವಳ್ಳಿ ಕಳಸ ಇವರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್., ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀಕಾಂತ್ ಲೋಣಿ, ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಕೊಪ್ಪಲ ಮೋಹನ ಕದ್ರಿ, ಸದಸ್ಯರುಗಳಾದ ಜಿ.ಎಸ್.ಉಲ್ಲಾಳ್, ಗುರುರಾಜ ಭಟ್, ರಾಜೇಶ್, ರಾಘವ., ಪುಟ್ಟಸ್ವಾಮಿ, ದಯಾನಂದ ಬೆಳ್ಳಾಲ, ಪೃಥ್ವಿ ರಾಜೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.