×
Ad

‘ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರ ವಿರುದ್ಧದ ಹೋರಾಟ ಜನಾಂದೋಲನವಾಗಲಿ’

Update: 2025-03-12 20:43 IST

ಬ್ರಹ್ಮಾವರ, ಮಾ.12: ಬಹುಕೋಟಿ ವಂಚನೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣದಲ್ಲಿ ರೈತರ ಶ್ರಮದ ಲೂಟಿಯಾಗಿದೆ. ಅಂದರೆ ಅದು ಅಂತಿಮವಾಗಿ ಜನರ ಹಣವಾಗಿದೆ. ಆದುದರಿಂದ ಉಡುಪಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಜನರನ್ನು ಒಂದುಗೂಡಿಸಿ ಜನಾಂದೋಲನವಾಗಿ ರೂಪಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.

ಬ್ರಹ್ಮಾವರದಲ್ಲಿ ಕಳೆದ ಮೂರು ವಾರಗಳಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯಲ್ಲಿ ನಡೆದ ಬಹುಕೋಟಿ ವಂಚನೆ ಮತ್ತು ಅದರ ತನಿಖೆಗೆ ವಿಳಂಬ ನೀತಿ ಖಂಡಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯನ್ನು ಬೆಂಬಲಿಸಿ ಅವರು ಇಂದು ಮಾತನಾಡಿದರು.

ಸಕ್ಕರೆ ಕಾರ್ಖಾನೆಯ ಸಾರ್ವಜನಿಕ ಆಸ್ತಿ ಹಾಗೂ ಬಹುಕೋಟಿ ಹಣ ವನ್ನು ಕೆಲವು ವ್ಯಕ್ತಿಗಳು ಲಪಟಾಯಿ ಸಿದ್ದಾರೆ ಎಂದು ದೂರು ನೀಡಿದ್ದರೂ ತನಿಖೆಯ ಪ್ರಗತಿ ವಿಳಂಬ ಆಗುತ್ತಿರುವುದಲ್ಲದೇ ದರೋಡೆ ಮಾಡಿದ ವರು ಕಾನೂನಿಗಿಂತ ದೊಡ್ಡವರು ಎಂಬ ಸಂದೇಶ ಹೋಗುತ್ತಿರುವುದು ಕಾನೂನಿನ ಅಣಕ ಹಾಗೂ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ಎಂದವರು ಬಣ್ಣಿಸಿದರು.

ಇಂದಿನ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ., ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಚ್. ನರಸಿಂಹ, ರಾಜೀವ ಪಡುಕೋಣೆ, ರಾಮಚಂದ್ರ ನಾವಡ, ನಾಗರತ್ನ ನಾಡ, ಶೋಭ ನಾಡ, ಶಶಿಧರ ಗೊಲ್ಲ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜು ನಾಥ ಶೆಟ್ಟಿಗಾರ್, ಕವಿರಾಜ್ ಎಸ್, ರವಿ ವಿ.ಎಂ, ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News