×
Ad

ಶಿರಿಯಾರ ಕಲ್ಮರ್ಗಿ ರಾಮಮಂದಿರದಿಂದ ಕದ್ದ ಮೂರ್ತಿಗಳು ಹೊಳೆ ಬದಿಯಲ್ಲಿ ಪತ್ತೆ

Update: 2025-03-12 22:06 IST

ಕೋಟ, ಮಾ.12: ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಕಲ್ಮರ್ಗಿಯ ರಾಮಾಂಜನೇಯ ಸೇವಾ ಟ್ರಸ್ಟ್‌ನ ಶ್ರೀರಾಮ ಮಂದಿರ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ (ಮಾ.11) ಕಳವಾದ ಮೂರ್ತಿಗಳು ಬುಧವಾರ ಬೆಳಗ್ಗೆ ಹೊಳೆ ಬದಿಯಲ್ಲಿ ಪತ್ತೆಯಾಗಿವೆ.

ಕಳೆದ ರಾತ್ರಿ 9:30ಕ್ಕೆ ರತ್ನಾಕರ ಎಂಬವರು ದೇವಸ್ಥಾನದ ಪೂಜೆ ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ್ದು, ಇಂದು ಬೆಳಗ್ಗೆ ನಿತ್ಯದಂತೆ ಬೆಳಗ್ಗೆ 6:00ಗಂಟೆಗೆ ಪೂಜೆಗೆಂದು ಬಂದು ನೋಡುವಾಗ ರಾಮ ಮಂದಿರದ ಪ್ರಧಾನ ಬಾಗಿಲು ಹಾಗೂ ಗರ್ಭಗುಡಿಯ ಬಾಗಿಲನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ಒಡೆದು ಗರ್ಭಗುಡಿ ಪ್ರವೇಶಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಪಂಚಲೋಹದ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ವಿಗ್ರಹಗಳನ್ನು ಕಳವು ಮಾಡಿದ್ದು, ಕಳವಾದ ವಿಗ್ರಹ, ಚಿನ್ನಾಭರಣ ಸೊತ್ತುಗಳು ಹಾಗೂ ಕಾಣಿಕೆ ಡಬ್ಬದಲ್ಲಿದ್ದ ನಗದು ಸೇರಿ ಒಟ್ಟು 6.80 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೇವಸ್ಥಾನದ ಕಾರ್ಯದರ್ಶಿ ಎನ್. ಗಣೇಶ್ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೋಟ ಪೊಲೀಸರು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಶ್ವಾನದಳವನ್ನು ಕರೆಸಿದ್ದರು. ಶ್ವಾನ ಕಳ್ಳರ ಜಾಡನ್ನು ಹಿಡಿದು ಸಮೀಪದ ಹೊಳೆ ಬದಿಗೆ ಹೋಗಿದ್ದು, ಅಲ್ಲಿ ಕಳವಾದ ಮೂರ್ತಿಗಳನ್ನು ಕಳ್ಳರು ಹೊಳೆ ಬದಿಯಲ್ಲಿ ಇರಿಸಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News