×
Ad

ಅನ್ನಭಾಗ್ಯ ಯೋಜನೆ: ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ

Update: 2025-03-13 20:27 IST

ಉಡುಪಿ, ಮಾ.13: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿ ದೊರಕಬೇಕೆಂಬ ಉದ್ದೇಶದಿಂದ ಜುಲೈ 2023ರಿಂದ ನೀಡಲಾಗುತ್ತಿದ್ದ ನಗದು ವರ್ಗಾವಣೆಯ ಬದಲಾಗಿ ಪ್ರತಿ ತಿಂಗಳು ಎನ್‌ಎಫ್‌ಎಸ್‌ಎ ಯೋಜನೆಯ ಅಕ್ಕಿ ಹಂಚಿಕೆ ಯೊಂದಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಫೆಬ್ರವರಿ ತಿಂಗಳಿಂದ ಅನ್ವಯವಾಗುವಂತೆ ಮಾರ್ಚ್ ತಿಂಗಳಿಂದ ನೀಡಲಾಗುತ್ತದೆ.

ಅದರಂತೆ ಮಾರ್ಚ್ ತಿಂಗಳಲ್ಲಿ ಆದ್ಯತಾ ಪಡಿತರ ಚೀಟಿ ಹೊಂದಿರುವ ಪ್ರತಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಎನ್‌ಎಫ್‌ಎಸ್‌ಎ ಯೋಜನೆಯ 5 ಕೆ.ಜಿ, ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಬಾಬ್ತು 5 ಕೆ.ಜಿ ಅಕ್ಕಿ, ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ 5 ಕೆ.ಜಿ. ಅಕ್ಕಿ ಸೇರಿ ಒಟ್ಟು ಈ ತಿಂಗಳಲ್ಲಿ 15 ಕೆ.ಜಿ ಅಕ್ಕಿಯನ್ನು ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ವಿತರಿಸಲಾಗುತ್ತದೆ.

ಅಂತ್ಯೋದಯ ಪಡಿತರ ಚೀಟಿಗಳಿಗೆ ಎನ್‌ಎಫ್‌ಎಸ್‌ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಂಚಿಕೆ ಇರುವುದರಿಂದ 2025ರ ಮಾರ್ಚ್ ತಿಂಗಳಿನಿಂದ ಏಕಸದಸ್ಯ, ದ್ವಿಸದಸ್ಯ, ತ್ರಿಸದಸ್ಯರನ್ನು ಹೊಂದಿರುವ ಅಂತ್ಯೋದಯ ಪಡಿತರ ಚೀಟಿಗಳನ್ನು ಹೊರತುಪಡಿಸಿ 4 ಮತ್ತು 4ಕ್ಕಿಂತ ಹೆಚ್ಚಿನ ಸದಸ್ಯ ರಿರುವ ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ತಿಂಗಳಲ್ಲಿ ಹೆಚ್ಚುವರಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತದೆ ಎಂದುಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News