ಉಡುಪಿ: ಕೃಷ್ಣ ಮಠದಲ್ಲಿ ಸುವರ್ಣಪಥಕ್ಕೆ ಜೋಷಿ ಭೂಮಿಪೂಜೆ
ಉಡುಪಿ, ಮಾ.15: ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ.
ಈ ಯೋಜನೆಗಳಲ್ಲಿ ಅತ್ಯಂತ ಮಹತ್ವದ್ದು ಗೀತಾಮಂದಿರ ಸಮೀಪದಿಂದ ರಥಬೀದಿ ಸಂಪರ್ಕಿಸುವ ಅತ್ಯಾಕರ್ಷಕವಾದ ‘ಸುವರ್ಣ ಪಥ’ ಮೇಲ್ಸೇತುವೆ ಕಾಮಗಾರಿಗೆ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹ್ಲಾದ ಜೋಷಿ ಶಿಲಾನ್ಯಾಸ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜೋಷಿ, ಪುತ್ತಿಗೆ ಶ್ರೀ ವಿಶ್ವದಾದ್ಯಂತ ಸ್ಥಾಪಿಸಿರುವ ಮಠಗಳಿಂದ ನಿರಂತರವಾಗಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಗವದ್ಗೀತೆಯ ಪ್ರಚಾರದ ಉದ್ದೇಶದಿಂದ ಪುತ್ತಿಗೆಶ್ರೀಗಳು ನಡೆಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಆಂದೋಲನವನ್ನು ಪ್ರಶಂಸಿಸಿದರು.
ಪರ್ಯಾಯ ಶ್ರೀಸುಗುಣೇಂದ್ರತೀರ್ಥರು ಮಾತನಾಡಿ, ಪ್ರಹ್ಲಾದ ಜೋಷಿ ಕಳಂಕ ರಹಿತ ರಾಜಕಾರಣಿ ಎಂದು ಪ್ರಶಂಸಿಸಿ, ದೇವರ ಅನುಗ್ರಹದಿಂದ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದು ಹೇಳಿ ಸಚಿವ ದಂಪತಿಗಳನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜೋಷಿ ದಂಪತಿಗಳಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಅವರು ನೀಡಿದರು.
ಸಭೆಯಲ್ಲಿ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ನಾರಾಯಣ ಗಂಭೀರ, ಮಠದ ದಿವಾನರಾದ ನಾಗರಾಜ ಆಚಾರ್ಯ, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ. ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ಸಂತೋಷ್ ಶೆಟ್ಟಿ, ಸುಗುಣ ಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಉಪಸ್ಥಿತರಿದ್ದರು.
ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಪತ್ನಿ ಸಮೇತರಾಗಿ ಸಚಿವರು ಶ್ರೀಕೃಷ್ಣಮುಖ್ಯಪ್ರಾಣರ ದರ್ಶನ ಪಡೆದು ಪ್ರಸಾದ ವನ್ನು ಸ್ವೀಕರಿಸಿದರು.