ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಉಡುಪಿ, ಮಾ.16: ನೆಹರು ಯುವ ಕೇಂದ್ರ ಉಡುಪಿ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ವನ್ನು ರವಿವಾರ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ಯುವಜನತೆಯಲ್ಲಿ ಶಿಸ್ತು, ನಾಯಕತ್ವ ಹಾಗೂ ಸಂಘಟನೆ ಮುಖ್ಯ. ಓದಿನೊಂದಿಗೆ ಕ್ರೀಡೆ ಯಲ್ಲೂ ತೊಡಗಿಸಿಕೊಳ್ಳುವುದರಿಂದ ಇವುಗಳು ಬೆಳೆಯಲು ಸಾಧ್ಯ. ಶಿಕ್ಷಣದ ಜೊತೆ ಕ್ರೀಡೆಗೂ ಒತ್ತು ನೀಡಿದಾಗ ಆರೋಗ್ಯವಂತರಾಗಿರಬಹುದು. ಯುವಜನತೆ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡು ಮುಂದೆ ದೇಶದ ಆಸ್ತಿಯಾಗಬೇಕು ಎಂದು ಹೇಳಿದರು.
ಉಡುಪಿ ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ.ಗಣನಾಥ ಎಕ್ಕಾರು ಮಾತನಾಡಿ, ಯುವಜನತೆಯನ್ನು ಸಂಘಟಿಸುವ ಕಾರ್ಯ ಇಂದಿನ ಬಹಳ ದೊಡ್ಡ ಅಗತ್ಯವಾಗಿದೆ. ಕ್ರೀಡೆ ಎಂಬುದು ಬಹಳ ಮಹತ್ವದ್ದಾಗಿದ್ದು, ಇದು ದೈಹಿಕ, ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಸಹಕಾರಿಯಾಗಿದೆ. ಈ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಅಧ್ಯಯನದ ಪ್ರಕಾರ ಕ್ರೀಡೆ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಮನುಷ್ಯನ ಮಾನಸಿಕ ಹಾಗೂ ಸಾಂಸ್ಕೃತಿಕ ಬೆಳೆವಣಿಗೆಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ನೆಹರು ಯುವ ಕೇಂದ್ರ ಕಾರ್ಯಕ್ರಮ ಸಂಯೋಜಕಿ ಶ್ರೀದೇವಿ, ಬೆಳಪು ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಶಾನವಾಝ್ ಫಜಲುದ್ದೀನ್ ಉಪಸ್ಥಿತರಿದ್ದರು.
ಉಡುಪಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕ್ರೀಡಾಧಿಕಾರಿ ವಸಂತ ಜೋಗಿ ವಂದಿಸಿದರು.
ಕ್ರೀಡಾಕೂಟದಲ್ಲಿ 15ರಿಂದ 29ವರ್ಷದೊಳಗಿನ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಖೋಖೋ ಹಾಗೂ ವೈಯಕ್ತಿಕ ವಿಭಾಗದಲ್ಲಿ ಪುರುಷರಿಗೆ ಬ್ಯಾಡ್ಮಿಂಟನ್, ಭಾರ ಎತ್ತುವ ಸ್ಪರ್ಧೆ, ಮಹಿಳೆಯರಿಗೆ 100ಮೀಟರ್ ಓಟ ಹಾಗೂ ಸ್ಪೋ ಸೈಕಲ್ ಸ್ಪರ್ಧೆಗಳು ನಡೆದವು.