×
Ad

ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು: ಉಡುಪಿ ಜಿಲ್ಲಾಧಿಕಾರಿ

Update: 2025-03-21 21:10 IST

ಉಡುಪಿ: ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾ ಗಿದೆ. ಹೀಗಾಗಿ ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಅದನ್ನು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಹೇಳಿದ್ದಾರೆ.

ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಐಕ್ಯೂಎಸಿ ಮತ್ತು ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಜನಪದ ಉತ್ಸವ ‘ಜನ ಜಲ್ಸಾ 2025’ವನ್ನು ಜ್ಯೋತಿ ಬೆಳಗಿಸುವ ಮೂಲಕ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು. ವೈವಿಧ್ಯಮಯ ಸಂಸ್ಕೃತಿಗೆ ಹೆಸರಾಗಿರುವ ನಮ್ಮ ನಾಡಿನ ಹಿರಿಮೆಯನ್ನು ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಮಾತನಾಡಿ, ವಿದ್ಯಾರ್ಥಿ ಗಳು ಜೀವನದಲ್ಲಿ ಒಂದು ಉತ್ತಮ ಗುರಿಯನ್ನು ಹೊಂದಿರಬೇಕು. ಗುರಿ ಉತ್ತಮವಾಗಬೇಕಾದರೆ ಉತ್ತಮ ಸಂಸ್ಕೃತಿಯನ್ನು ಹೊಂದಿರಬೇಕು. ಗುರು-ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶ್ರೀಧರ್‌ಪ್ರಸಾದ್ ಕೆ. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಜನಪದ ಉತ್ಸವದಲ್ಲಿ ಪಾಲ್ಗೊಂಡರು.

ಕಾಲೇಜು ವಿದ್ಯಾರ್ಥಿಗಳು ಜನಪದ ಪರಿಕರ, ಉಪಕರಣಗಳನ್ನು ಇಟ್ಟು ತಮ್ಮ ತರಗತಿ ಕೊಠಡಿಗಳನ್ನು ಇಟ್ಟು ಅಲಂಕರಿಸಿದ್ದರು ಹಾಗೂ ಸಾಂಪ್ರದಾಯಿಕ ರೀತಿಯ ರುಚಿಕರ ತಿಂಡಿ ತಿನಸುಗಳನ್ನು ತಯಾರಿಸಿ ಮಾರಾಟ ಮಾಡಿದರು.

ಕಾರ್ಯಕ್ರಮದಲ್ಲಿ ಸಾಫಲ್ಯ ಟ್ರಸ್ಟ್‌ನ ನಿರ್ದೇಶಕಿ ನಿರುಪಮಾ ಪ್ರಸಾದ್, ಖ್ಯಾತ ಬರಹಗಾರ್ತಿ ವಸಂತಿ ಶೆಟ್ಟಿ ಬ್ರಹ್ಮಾವರ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ, ವಾಣಿಜ್ಯ ನಿಕಾಯದ ಡೀನ್ ಗೌರಿ ಎಸ್ ಭಟ್ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಹಾಗೂ ಕಲಾ ನಿಕಾಯದ ಡೀನ್ ಪ್ರೊ.ನಿಕೇತನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಕೆ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾ ಎಸ್.ಎನ್ ವಂದಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News