ಹಿರಿಯ ನಾಗರಿಕರ ಮರೆವು ಕಾಯಿಲೆಗೆ ಜೀವನಶೈಲಿ ಬದಲು ಕಾರಣ: ಡಾ.ಪಿ.ವಿ.ಭಂಡಾರಿ
ಮಣಿಪಾಲ, ಮಾ.21: ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಡಿಮೆನ್ಶಿಯಾ ಅಥವಾ ಮರೆವಿನ ಕಾಯಿಲೆ ಈಗ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕಡೆಗೆ ಬೊಟ್ಟು ಮಾಡುತ್ತಿವೆ ಎಂದು ಖ್ಯಾತ ಮನೋರೋಗ ತಜ್ಞ ಹಾಗೂ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಹೇಳಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್,ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರಾಯೋಜಕತ್ವ ದಲ್ಲಿ ಬಿವಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಸಂವಾದ, ಆರೋಗ್ಯ ಮಾಹಿತಿ ಮತ್ತು ವಿವಿಧ ಚಟುವಟಕೆಗಳನ್ನು ಒಳಗೊಂಡ ಮೂರು ದಿನಗಳ ಕಾರ್ಯಕ್ರಮ ‘60ರ ನಂತರ ಮರಳಿ ಅರಳಿ’ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿರಿಯ ನಾಗರಿಕರ ಆರೋಗ್ಯ ಎಂಬುದು ಬಹು ಆಯಾಮದ ವಿಷಯವಾಗಿದ್ದು ಉತ್ತಮ ಆಹಾರ, ಸೂಕ್ತ ವೈದ್ಯಕೀಯ ಸಲಹೆ, ಮನೆ ಮಂದಿಯೊಂದಿಗೆ ಸಹಬಾಳ್ವೆ, ವ್ಯಾಯಾಮ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದವರು ಹೇಳಿದರು.
ಹಿರಿಯ ನಾಗರಿಕರಿಗಾಗಿ ನಡೆಸುತ್ತಿರುವ ಇಂತಹ ಶಿಬಿರಗಳು ನಿರಂತರ ವಾಗಿ ನಡೆಯಬೇಕು. ಇದರಿಂದಾಗಿ ಹಿರಿಯರ ಸ್ವಾಸ್ಥ್ಯದಲ್ಲಿ ಸುಧಾರಣೆ ಹಾಗೂ ಉತ್ತಮ ಬದಲಾವಣೆ ತರಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಕೆ.ನಂದ ಕಿಶೋರ್ ಹಾಗೂ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರ ಮನೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಬಿವಿಟಿಯ ಆಡಳಿತ ವಿಶ್ವಸ್ಥ ವಿನುತಾ ಆಚಾರ್ಯ ವಹಿಸಿದ್ದರು.
ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ವ್ಯವಸ್ಥಾಪಕ ಮನೋಹರ ಕಟಗೇರಿ ವಂದಿಸಿ, ಕಾರ್ಯಕ್ರಮ ಅಧಿಕಾರಿ ರಾಘವೇಂದ್ರ ಆಚಾರ್ಯ ನಿರೂಪಿಸಿದರು.
ಮೂರು ದಿನಗಳ ಶಿಬಿರದಲ್ಲಿ ಡಾ.ವಿರೂಪಾಕ್ಷ ದೇವರಮನೆ, ನಾಡೋಜ ಕೆ.ಪಿ ರಾವ್, ಡಾ. ಸೆಬ್‌ಸ್ಟಿನಾ ಅನಿತಾ ಡಿ’ಸೋಜಾ, ನಿರಂಜನ್ ಭಟ್, ಪ್ರೊ. ಜೈಕಿಶನ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿ ಸಿದರು.ಉಡುಪಿ ಪರಿಸರದ 50ಕ್ಕೂ ಅಧಿಕ ಹಿರಿಯ ನಾಗರಿಕರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.