×
Ad

ಕೇಂದ್ರದ ನೀತಿಯಿಂದ ರಂಗಭೂಮಿಯಂತಹ ಸೃಜನಶೀಲತೆಗಳು ಸತ್ತು ಹೋಗುತ್ತಿವೆ: ಡಾ.ನಾಗರಾಜ ಮೂರ್ತಿ

Update: 2025-04-07 20:45 IST

ಉಡುಪಿ, ಎ.7: ಕಾರ್ಖಾನೆ ರಂಗಭೂಮಿ ಇಂದು ಸತ್ತು ಹೋಗುತ್ತಿವೆ. ಕೇಂದ್ರ ಸರಕಾರ ಬೃಹತ್ ಕಾರ್ಖಾನೆಗಳನ್ನು ಮುಚ್ಚುವ ಸ್ಥಿತಿಗೆ ತಂದಿದೆ. ಅಲ್ಲದೆ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ರಂಗಭೂಮಿಯಂತಹ ಸೃಜನಶೀಲತೆಗಳನ್ನು ಕೊಲ್ಲುವ ಕೆಲಸವನ್ನು ಸರಕಾರ ಮಾಡುತ್ತಿದೆ. ಹಾಗಾಗಿ ಕಾರ್ಖಾನೆಗಳಲ್ಲಿನ ರಂಗಭೂಮಿಯನ್ನು ಮತ್ತೆ ಕ್ರಿಯಾಶೀಲಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜ ಮೂರ್ತಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸೋಮವಾರ ನಡೆದ ರಂಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ರಾಜೀವ ಗಾಂಧಿ ಸರಕಾರ ನೀಡಿದ್ದ ರೈಲಿನಲ್ಲಿ ಕಲಾವಿದರಿಗೆ ಶೇ.75 ರಷ್ಟು ರಿಯಾಯಿತಿಯನ್ನು ಕೊರೋನಾ ಕಾರಣ ನೀಡಿ ಕೆಲವು ವರ್ಷಗಳ ಹಿಂದೆ ಕೈಬಿಡಲಾಗಿದೆ. ಆ ಕುರಿತು ಕೇಂದ್ರ ರೈಲ್ವೆ ಸಚಿವಾಲಯಕ್ಕೆ 10 ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದಕ್ಕೂ ಸ್ಪಂದನೆ ಇಲ್ಲ. ಸರಕಾರಗಳು ಅಧಿಕಾರಿಗಳ ಸಂಬಳವನ್ನು ಬಹಳ ಮುತುವರ್ಜಿಯಿಂದ ಜಾಸ್ತಿ ಮಾಡುತ್ತವೆ. ಆದರೆ ಕಲಾವಿದರ ಕಷ್ಟವನ್ನು ಕೇಳಲು ಯಾರು ಸಿದ್ಧರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಎಚ್‌ಆರ್‌ವಿಯಿಂದ ಬರುವ ರೆಪರ್ಟರಿ ಅನುದಾನಗಳನ್ನು ಶೇ.60ರಷ್ಟು ಸಂಸ್ಥೆಗಳು ಪಡೆಯು ತ್ತಿವೆ. ಆದರೆ ಶೇ.10 ಮಾತ್ರ ನಿಜವಾದ ರೆಪರ್ಟರಿಗಳಿವೆ. ಉಳಿದವುಗಳು ಹೆಸರಿಗೆ ಮಾತ್ರ ಇವೆ. ಕೇಂದ್ರ ಸರಕಾರ ಒಂದೊಂದು ಸಂಸ್ಥೆಗಳಿಗೆ 15ಲಕ್ಷ ರೂ. ಅನುದಾನ ನೀಡುತ್ತಿದೆ. ಅಂತಹ 32 ಸಂಸ್ಥೆಗಳು ಕರ್ನಾಟಕದಲ್ಲಿ ಇವೆ. ಕೇಂದ್ರ ಸರಕಾರದ ಮಾಹಿತಿ ಪ್ರಕಾರ 48 ರೆಪರ್ಟರಿಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿವೆ. ಆದರೆ ಅವು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಇದರ ಹೆಸರಿನಲ್ಲೂ ಮೋಸ ವಂಚನೆಗಳು ನಡೆಯುತ್ತಿವೆ. ಆದುದರಿಂದ ಕಲಾವಿದರು ಎಚ್ಚೆತ್ತುಕೊಂಡು ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯನ್ನು ನಾಟಕ ಅಕಾಡೆಮಿ ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತ ಬರುತ್ತಿವೆ. ಇಲ್ಲಿನ ನಾಟಕಗಳಿಗೆ ಬೆಂಗಳೂರಿನಲ್ಲಿ ಅವಕಾಶಗಳನ್ನು ಕಲ್ಪಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ಸಂವಾದದಲ್ಲಿ ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ., ಲೇಖಕ ಭಾಸ್ಕರ ರಾವ್, ಉಪನ್ಯಾಸಕ ಪ್ರಭಾಕರ ತುಮರಿ, ರಾಮಾಂಜಿ ನಮ್ಮ ಭೂಮಿ ಪಾಲ್ಗೊಂಡರು.

ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾಲೇಜು ರಂಗಭೂಮಿ ಬಹಳ ಮುಖ್ಯ

ರಂಗಭೂಮಿಯಿಂದ ಬಂದ ಸುಮಾರು 800 ಕಲಾವಿದರು ಇಂದು ಕನ್ನಡ ಕಿರುತೆರೆಯಲ್ಲಿ ಇದ್ದಾರೆ. ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರೇಮಾ, ಗಣೇಶ್, ಕಿಶೋರ್ ಸೇರಿದಂತೆ ಹಲವು ಚಿತ್ರನಟರ ಮೂಲ ಈ ಕಾಲೇಜು ರಂಗಭೂಮಿಯಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜ ಮೂರ್ತಿ ತಿಳಿಸಿದರು.

ಇಂದು ಕನ್ನಡದ ಹವ್ಯಾಸಿ ರಂಗಭೂಮಿ ಭದ್ರವಾಗಿ ನಿಲ್ಲಲು ಸಾಧ್ಯವಾಗಿರುವುದು ಕಾಲೇಜು ರಂಗಭೂಮಿಯಿಂದ. ಆದುದರಿಂದ ಕಾಲೇಜು ರಂಗಭೂಮಿ ಬಹಳ ಮುಖ್ಯವಾಗಿದೆ. ಆದುದರಿಂದ ಕಾಲೇಜು ರಂಗಭೂಮಿ ಯನ್ನು ಬಲಿಷ್ಠವಾಗಿ ಕಟ್ಟುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News