ಕಾರ್ಕಳದ ಕೃಷಿಕನ ಮಗಳು ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಟಾಪರ್
Update: 2025-04-08 19:18 IST
ಕಾರ್ಕಳ, ಎ.10: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಧೀಕ್ಷಾ ಶೆಟ್ಟಿ ವಾಣಿಜ್ಯ ವಿಭಾಗದಲ್ಲಿ 595(ಶೇ.99.17) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಕಾರ್ಕಳ ಜೋಡುರಸ್ತೆಯ ನಿವಾಸಿಯಾಗಿರುವ ಸುಧೀಕ್ಷಾ ಶೆಟ್ಟಿ, ತಂದೆ ಸುರೇಶ್ ಶೆಟ್ಟಿ ಕೃಷಿಕರಾಗಿದ್ದು, ತಾಯಿ ಸುದರ್ಶಿನಿ ಶೆಟ್ಟಿ ಗೃಹಿಣಿಯಾಗಿದ್ದಾರೆ. ‘ನಾನು ಪ್ರತಿದಿನ ಓದುತ್ತಿರಲಿಲ್ಲ. ಆದರೂ ತರಗತಿಯಲ್ಲಿ ಉಪನ್ಯಾಸಕರು ಪಾಠ ಮಾಡುವಾಗ ಹೆಚ್ಚು ಗಮನ ಕೊಡುತ್ತಿದ್ದೆ. ಯಾವುದೇ ಟ್ಯುಷನ್ ಗೂ ನಾನು ಹೋಗಿಲ್ಲ. ಮುಂದೆ ಸಿಎ ಮಾಡಬೇಕೆಂಬುದು ನನ್ನ ಕನಸು ಆಗಿದೆ’ ಎಂದು ಸುಧೀಕ್ಷಾ ಶೆಟ್ಟಿ ತಿಳಿಸಿದರು.