ರಸ್ತೆ ಅಭಿವೃದ್ಧಿ ಕಾಮಗಾರಿ: ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಉಡುಪಿ, ಎ.17: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿ ಯಾಗಿರುವ ಮಂಗಳೂರು-ಅತ್ರಾಡಿ (ಎನ್.ಹೆಚ್.67) ರಸ್ತೆಯ 71.74 ರಿಂದ 75.74ಕಿ.ಮೀ.(ಹಿರೇಬೆಟ್ಟು-ಪಟ್ಲ ಹತ್ತಿರದ ರಸ್ತೆ)ವರೆಗೆ ರಸ್ತೆ ಅಭಿವೃದ್ಧಿ (ಅಗಲೀಕರಣ) ಕಾಮಗಾರಿಗೆ ಮಂಜೂರಾತಿ ದೊರೆತಿದೆ.
ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿರುವುದರಿಂದ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿ ಸಲು ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಕಲ್ಪಿಸುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿ ಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221(ಎ)(2) (5)ರನ್ವಯ ಎ.18 ರಿಂದ ಮೇ 25ರವರೆಗೆ ಹಿರೇಬೆಟ್ಟು-ಪಟ್ಲ ರಸ್ತೆಯ ಬೈಲುಗದ್ದೆ ಬಳಿಯ ರಸ್ತೆ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ, ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಅತ್ರಾಡಿ- ಪಟ್ಲ- ಒಂತಿ ಬೆಟ್ಟು- ಕೊಡಿಬೆಟ್ಟು- ಹಂಗಾರಕಟ್ಟೆ- ವರ್ವಾಡಿ ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.