×
Ad

ಯಕ್ಷಧ್ರುವ ಟ್ರಸ್ಟ್‌ನಿಂದ ಯಕ್ಷಗಾನ ಕಲಾವಿದರಿಗೆ ಉಚಿತ ಮನೆ: ಇಂದ್ರಾಳಿ ಜಯಕರ ಶೆಟ್ಟಿ

Update: 2025-04-18 21:36 IST

ಉಡುಪಿ, ಎ.18: ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಧ್ರುವ ಪಟ್ಲಾಶ್ರಯದಡಿ ಕೊಡವೂರು ಲಕ್ಷ್ಮೀನಗರದ ಗರ್ಡೆಯಲ್ಲಿ ಬಡ ಯಕ್ಷಗಾನ ಕಲಾವಿದರಿಗಾಗಿ ನಿರ್ಮಿಸಲಾಗುವ 20 ಮನೆಗಳ ಗೃಹಸಮುಚ್ಛಯಕ್ಕೆ ಶನಿವಾರ ಶೃಂಗೇರಿ ಶ್ರೀಶಾರದಾ ಮಠದ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಭೂಮಿಪೂಜೆ ನೆರವೇರಿಸಲಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಉಡುಪಿ ಜಿಲ್ಲಾ ಘಟಚಕದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರು ಈ ವಿಷಯ ತಿಳಿಸಿದರು.

ಪಟ್ಲ ಸತೀಶ್ ಶೆಟ್ಟಿ ಅವರು 2015ರಲ್ಲಿ ಕಟೀಲಿನಲ್ಲಿ ಪ್ರಾರಂಭಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸ್ಥಾಪನೆಯ ಹತ್ತು ವರ್ಷಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಬಡ ಯಕ್ಷಗಾನ ಕಲಾ ವಿದರಿಗಾಗಿ ನೂರು ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದೆ ಎಂದರು.

ಈ ಯೋಜನೆಯಡಿ ರಾಜ್ಯ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅವರು ದಾನವಾಗಿ ನೀಡಿರುವ ಕೊಡವೂರು ಲಕ್ಷ್ಮೀನಗರ ಗರ್ಡೆಯ ಶ್ರೀಶಂಕರ ಮಠ ಸಮೀಪದ 50 ಸೆಂಟ್ಸ್ ಜಾಗದಲ್ಲಿ ಯಕ್ಷಗಾನ ಕಲಾವಿದರಿಗಾಗಿ 20 ಮನೆಗಳ ಗೃಹ ಸಮುಚ್ಛಯ ‘ಯಕ್ಷಧ್ರುವ ಪಟ್ಲಾಶ್ರಯ’ ನಿರ್ಮಾಣಗೊಳ್ಳಲಿದೆ ಎಂದರು.

ಎ.19ರ  ಬೆಳಗ್ಗೆ 10:00ಗಂಟೆಗೆ ಶೃಂಗೇರಿ ಶ್ರೀಶಾರದಾ ಪೀಠದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಭೂಮಿಪೂಜೆ ನೆರವೇರಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ದಾನಿ ಪ್ರೊ.ಎಂ.ಎಲ್.ಸಾಮಗ, ಟ್ರಸ್ಟ್‌ನ ಗೌರವಾಧ್ಯಕ್ಷ ಡಾ.ಸದಾಶಿವ ಶೆಟ್ಟಿ ಕನ್ಯಾನ, ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಸಮಿತಿಯ ಪದಾಧಿಕಾರಿ ಗಳು ಉಪಸ್ಥಿತರಿರುವರು ಎಂದು ಜಯಕರಶೆಟ್ಟಿ ಇಂದ್ರಾಳಿ ತಿಳಿಸಿದರು.

ಇಲ್ಲಿ ಬೆಳಗ್ಗೆ 9:00ರಿಂದ ತೆಂಕು-ಬಡಗು ತಿಟ್ಟುಗಳ ‘ನಾದವೈಕುಂಠ’ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಹರಿಪ್ರಸಾದ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ವಿಟ್ಲ ಹರೀಶ್ ಜೋಷಿ, ಸಂಚಾಲಕ ಸುಧಾಕರ ಆಚಾರ್ಯ, ಅರುಣ್‌ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News