×
Ad

ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯನ್ನು ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ

Update: 2025-04-22 20:42 IST

ಉಡುಪಿ, ಎ.22: ಬ್ರಹ್ಮಾವರವೂ ಸೇರಿದಂತೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ನಿರಂತರ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಹಿರಿಯ ಪ್ರಾದೇಶಿಕ ಅಧಿಕಾರಿ ವಿ.ಪಿ. ಬ್ರಾಂಹಣಕರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೆದ್ದಾರಿ ಸಮಸ್ಯೆ ಹಾಗೂ ಸರ್ವಿಸ್ ರಸ್ತೆಗಳ ಅಗತ್ಯತೆ ಕುರಿತು ಚರ್ಚಿಸಿದರು.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ನಿರಂತರವಾಗಿ ಅಪಘಾತಗಳಾಗುತಿದ್ದು, ಇತ್ತೀಚೆಗೆ ಬ್ರಹ್ಮಾವರದಲ್ಲಿ ಶಾಲಾ ಬಾಲಕನೊಬ್ಬ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವುದನ್ನು ಕೋಟ ಅವರು ಆರ್‌ಓ ಅವರ ಗಮನಕ್ಕೆ ತಂದರು. ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗಳಿಲ್ಲದಿರುವುದರಿಂದ ಆಗಿರುವ ಸಮಸ್ಯೆಗಳನ್ನು ಕೋಟ ಅವರ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರದಲ್ಲಿ ಭದ್ರಗಿರಿ ಜಂಕ್ಷನ್‌ನಿಂದ ಉಪ್ಪಿನಕೋಟೆ ವರೆಗೆ ತುರ್ತಾಗಿ ರಸ್ತೆ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಮಾಡುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಒಪ್ಪಿಕೊಂಡಿದ್ದರೂ, ಈವರೆಗೆ ಕಾಮಗಾರಿ ಯನ್ನೇ ಪ್ರಾರಂಭ ಮಾಡದಿರುವ ಬಗ್ಗೆ ಪ್ರಾದೇಶಿಕ ಅಧಿಕಾರಿ ಅವರಿಗೆ ಸಂಸದ ಕೋಟ ಮಾಹಿತಿ ಒದಗಿಸಿದರು.

ಇದೇ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ಮೇಲ್ಸೇತುವೆಗಾಗಿ (ಪ್ಲೈಓವರ್) ಯೋಜನಾ ವರದಿಯನ್ನು ತುರ್ತಾಗಿ ತಯಾರಿಸಿ ಕೇಂದ್ರಕ್ಕೆ ಕಳಿಹಿಸಿ ಕೊಡುವಂತೆಯೂ ಕೋಟ ಶ್ರೀನಿವಾಸ ಪೂಜಾರಿ ಬ್ರಾಂಹಣಕರ್‌ರನ್ನು ಒತ್ತಾಯಿಸಿದರು.

ಹೆಜಮಾಡಿಯಿಂದ ಪ್ರಾರಂಭಗೊಂಡು ಕುಂದಾಪುರದವರೆಗೆ ಈಗಾಗಲೇ ಆಗಿರುವ 15 ಕಿ.ಮೀ. ಉದ್ದದ ಸರ್ವಿಸ್ ರಸ್ತೆಯನ್ನು ಹೊರತುಪಡಿಸಿ ಮತ್ತೆ 42 ಕಿ.ಮೀ. ಹೊಸ ಸರ್ವಿಸ್ ರಸ್ತೆ ನಿರ್ಮಾಣದ ಅಗತ್ಯತೆ ಯನ್ನು ವಿವರಿಸಿ ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಿ ಕೂಡಲೇ ಕೇಂದ್ರ ಸರಕಾರಕ್ಕೆ ಕಳಿಸುವಂತೆಯೂ ಅವರು ಸೂಚನೆ ನೀಡಿದರು.

ಸಂಸದರ ಮನವಿಗೆ ಸ್ಪಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ, ತಾನು ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ವಿಳಂಬವಿಲ್ಲದೆ ಸರ್ವಿಸ್ ರಸ್ತೆ ನಿರ್ಮಿಸುವುದಾಗಿಯೂ ಸಂಸದರಿಗೆ ಭರವಸೆ ನೀಡಿದರು. ಬ್ರಹ್ಮಾವರ ಮೇಲ್ಸೇತುವೆ ಮತ್ತು ಹೆಜಮಾಡಿಯಿಂದ ಕುಂದಾಪುರದವರೆಗಿನ ಸರ್ವಿಸ್ ರಸ್ತೆಯ ಯೋಜನಾ ವರದಿಯನ್ನು ತಯಾರಿಸಿ ಒಂದು ವಾರದ ಒಳಗೆ ಕೇಂದ್ರಕ್ಕೆ ಕಳುಹಿಸಿ ಕೊಡುವುದಾಗಿ ಬ್ರಾಂಹಣಕರ್ ಸಂಸದ ಕೋಟರಿಗೆ ಭರವಸೆ ನೀಡಿದರು.

ಈ ಕುರಿತಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಮುಖೇನ ಮಾಹಿತಿ ನೀಡಿದ್ದು, ಪತ್ರದ ಸಾರಾಂಶವನ್ನು ಹಾಗೂ ಅದರ ಪ್ರತಿಯನ್ನು ಅವರು ಕೋಟ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಂಸದರ ಜೊತೆಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News